ಕೇರಳ,ಜ 29 (Daijiworld News/MSP): ಕೇರಳ ವಿಧಾನಸಭೆಯಲ್ಲಿ ಬುಧವಾರ ಬೆಳಗ್ಗೆ ನಾಟಕೀಯ ವಿದ್ಯಮಾನ ಸಾಕ್ಷಿಯಾಯಿತು. ಬಜೆಟ್ ಅಧಿವೇಶನ ಮುನ್ನ ಸಾಂಪ್ರದಾಯಿಕವಾಗಿ ಸರ್ಕಾರದ ಯೋಜನೆಗಳ ಕುರಿತು ಭಾಷಣ ಮಾಡಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಗಮಿಸಿದರು. ಸದನದ ಬಾವಿಗೆ ಬರುತ್ತಿದ್ದಂತೆ ವಿರೋಧ ಪಕ್ಷಗಳ ನಾಯಕರು ಅವರನ್ನು ಸುತ್ತುವರಿದು ಗೋ ಬ್ಯಾಕ್ ಗವರ್ನರ್, ಗೋ ಬ್ಯಾಕ್ ಗವರ್ನರ್ ಎಂದು ಘೋಷಣೆಗಳನ್ನು ಕೂಗಿದರು.
ರಾಜ್ಯಪಾಲರನ್ನು ಸದನಕ್ಕೆ ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಕರೆದುಕೊಂಡು ಬಂದಿದ್ದರು. ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯಿಂದಾಗಿ ಸದನದ ಬಾವಿಯೊಳಗೆ ರಾಜ್ಯಪಾಲರು ಸುಮಾರು 10 ನಿಮಿಷಗಳ ಕಾಲ ನಿಂತು ನಂತರ ಸದನದ ಮಾರ್ಷೆಲ್ ಗಳ ರಕ್ಷಣೆಯೊಂದಿಗೆ ಭಾಷಣ ಮಾಡಲು ಸ್ಪೀಕರ್ ವೇದಿಕೆಯತ್ತ ತೆರಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಫಲಕಗಳನ್ನು ಹಿಡಿದುಕೊಂಡು ರಾಜ್ಯಪಾಲರ ವಿರುದ್ದ ಪ್ರತಿಭಟನೆ ನಡೆಸಿದರು.
ಕೇರಳ ವಿಧಾನಸಭೆಯಲ್ಲಿ ಈ ರೀತಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡುತ್ತಿರುವುದು ಇದೇ ಮೊದಲಾಗಿದೆ.