ನವದೆಹಲಿ, ಜ 29 (Daijiworld News/MB) : ನಿರ್ಭಯಾ ಅಪರಾಧಿಗಳು ಗಲ್ಲಿನಿಂದ ತಪ್ಪಿಸಿಕೊಳ್ಳಲು ಒಂದರ ನಂತರ ಒಂದು ನಾಟಕವಾಡುತ್ತಿದ್ದು, ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸುಪ್ರೀಂ ಕೋರ್ಟ್ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದ್ದಾನೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ರಾಷ್ಟ್ರಪತಿಯು ಇನ್ನೋರ್ವ ಅಪರಾಧಿ ಮುಕೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕಾರ ಮಾಡಿದ ಹಿನ್ನಲೆಯಲ್ಲಿ ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್.ಭಾನುಮತಿ ನೇತೃತ್ವದ ನ್ಯಾಯಪೀಠವು ಮಂಗಳವಾರ ನಡೆಸಿತ್ತು.
ಈ ಸಂದರ್ಭದಲ್ಲಿ ತಿಹಾರ್ ಜೈಲಿನಲ್ಲಿ ಮುಖೇಶ್ ಕುಮಾರ್ಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಆತನ ಪರ ವಕೀಲರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದರು. ಆದರೆ ಪೊಲೀಸರ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಜೈಲಿನಲ್ಲಿ ಅನುಚಿತವಾಗಿ ನಡೆಸಿಕೊಂಡಿದ್ದಾರೆ ಎಂಬುದು ಕ್ಷಮೆ ನೀಡಲು ಕಾರಣವಾಗಬಾರದು ಎಂದು ಹೇಳಿದ್ದರು. ಆ ತೀರ್ಪು ಇಂದು ಪ್ರಕಟವಾಗಲಿದೆ.
ಒಟ್ಟಿನಲ್ಲಿ ಗಲ್ಲು ಶಿಕ್ಷೆಯನ್ನು ಮುಂದೂಡಲು ಹಾಗೂ ತಪ್ಪಿಸಲು ನಿರ್ಭಯಾ ಅಪರಾಧಿಗಳು ಒಂದರ ನಂತರ ಒಂದು ನಾಟಕ ಮಾಡುತ್ತಲ್ಲೇ ಇದ್ದಾರೆ.
ಈ ನಡುವೆ ನಿರ್ಭಯಾ ತಾಯಿ ಆಶಾ ದೇವಿಯವರು, "ಇಂತಹ ಗಂಭೀರ ಪ್ರಕರಣಗಳಲ್ಲಿ ಕ್ಷಮಾದಾನ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ಮಾಡಬೇಕು" ಎಂದು ನ್ಯಾಯಾಂಗ ಹಾಗೂ ಸರ್ಕಾರಕ್ಕೆ ವಿನಂತಿ ಮಾಡಿದ್ದಾರೆ.
ಅಪರಾಧಿಗಳನ್ನು ಫೆಬ್ರುವರಿ 1ರಂದು ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಇತ್ತೀಚೆಗೆ ವಾರಂಟ್ ಜಾರಿ ಮಾಡಿತ್ತು.