ಬೆಂಗಳೂರು, ಜ.29 (Daijiworld News/PY) : "ದೇಶದ್ರೋಹಿಗಳಿಗೆ ಬಿರಿಯಾನಿ ಬದಲು ಬುಲೆಟ್ ಕೊಡಬೇಕು" ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ಸಿ.ಟಿ ರವಿ ಅವರು, "ದೇಶದ್ರೋಹಿಗಳ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ವಿರೋಧಿಸುವವರು ಭಯೋತ್ಪಾದಕರಾದ ಅಜ್ಮಲ್ ಕಸಬ್, ಯಾಕುಬ್ ಮೆಮನ್ ನಂತಹ ಭಯೋತ್ಪಾದಕರ ಸಾವನ್ನು ವಿರೋಧಿಸುವವರು ಎಂದರ್ಥ. ಇಂಥವರು ಟುಕ್ಡೆ ಟುಕ್ಡೆ ಗ್ಯಾಂಗ್ ಸೇರಿಕೊಂಡು ಸಿಎಎ ವಿರುದ್ಧ ಅಪಪ್ರಚಾರ ನಡೆಸುವವರು. ದೇಶ ವಿರೋಧಿಗಳಿಗೆ ಬುಲೆಟ್ ಕೊಡಬೇಕು ಬಿರಿಯಾನಿ ಅಲ್ಲ" ಎಂದು ಸ್ಟಾಂಡ್ ವಿತ್ ಅನುರಾಗ್ ಠಾಕೂರ್ ಎಂದು ಹ್ಯಾಶ್ ಟ್ಯಾಗ್ ಬರೆದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ನವದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ದೇಶದ್ರೋಹಿಗಳನ್ನು ಶೂಟ್ ಮಾಡಿ ಕೊಲ್ಲಿ ಎಂದು ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಚುನಾವಣಾ ಆಯೋಗ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿ ಜ.30ರಂದು ಮಧ್ಯಾಹ್ನ 12 ಗಂಟೆಯೊಳಗೆ ಉತ್ತರಿಸುವಂತೆ ತಿಳಿಸಿದೆ.
ಭಾಷಣದ ವೇಳೆ ಕೈಗಳನ್ನು ಎತ್ತಿ 'ದೇಶದ್ರೋಹಿಗಳನ್ನು...' ಎಂದು ಘೋಷಣೆ ಕೂಗಿದ ಅನುರಾಗ್ ಠಾಕೂರ್ ಅವರ ಜೊತೆಗೆ 'ಗೋಲಿ ಮಾರೋ (ಗುಂಡಿಕ್ಕಿ ಕೊಲ್ಲಿ)' ಎಂದು ಸಭೆಯಲ್ಲಿ ಸೇರಿದ್ದ ಜನರೆಲ್ಲರೂ ಆಕ್ರೋಶದಿಂದ ಘೋಷಣೆ ಕೂಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವ ಅನುರಾಗ್ ಠಾಕೂರ್, ಗುಂಡಿಕ್ಕಿ ಕೊಲ್ಲಿ' ಎಂದು ಕೂಗಿದ್ದು ನಾನಲ್ಲ ಜನರು ಎಂದು ಹೇಳಿದ್ದಾರೆ. ಆದರೆ, ಠಾಕೂರ್ ಅವರ ಘೋಷಣೆಯ ಉದ್ದೇಶ ಅದೇ ಆಗಿತ್ತು ಎಂದು ಜಾಲತಾಣಿಗರು ಆರೋಪಿಸಿದ್ದಾರೆ.
ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಈ ರೀತಿಯ ಭಾಷಣ ಮಾಡಿದ್ದು, ಈ ಕಾರ್ಯಕ್ರಮದ ವಿಡಿಯೋವನ್ನು ಪರಿಶೀಲಿಸಿದ ಬಳಿಕ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ.