ನವದೆಹಲಿ, ಜ 29 (Daijiworld News/MB) : ಕೊರೋನಾ ವೈರಸ್ನಿಂದಾಗಿ ಚೀನಾದಲ್ಲಿ ಭಾರೀ ತಲ್ಲಣ ಉಂಟಾಗಿದ್ದು ಭಾರತದ ವಿದ್ಯಾರ್ಥಿಗಳು ಅಲ್ಲಿ ನೀರು ಊಟ ಸಿಗದೆ ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು "ನಮ್ಮನ್ನು ಇಲ್ಲಿಂದ ಭಾರತಕ್ಕೆ ಕರೆಸಿಕೊಳ್ಳಿ" ಎಂದು ಮನವಿ ಮಾಡಿದ್ದಾರೆ.
ಭಾರತದ ಮಹಾರಾಷ್ಟ್ರ, ಅಸ್ಸಾಂ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ಹಲವು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಚೀನಾಕ್ಕೆ ಹೋಗಿದ್ದಾರೆ. ಹಲವರು ವುಹಾನ್ ವಿಶ್ವವಿದ್ಯಾಲಯದ ಹಾಸ್ಟೆಲ್ಗಳಲ್ಲಿ ನೆಲೆಸಿದ್ದಾರೆ.
ಅಲ್ಲಿನ ಸರ್ಕಾರ ಕಳೆದ 15 ದಿನಗಳಿಂದ ಯಾರೂ ಕೂಡಾ ಹೊರಗೆ ಬರದಂತೆ ಸೂಚಿಸಿದ್ದು ನೀರು ಮತ್ತು ಆಹಾರ ತುಂಬಾ ನಿಯಮಿತವಾಗಿದ್ದು ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕೊರೋನಾ ವೈರಸ್ ದಾಳಿಯಿಂದಾಗಿ ಚೀನಾದಲ್ಲಿ ಈಗಾಗಲೇ 132ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಜನರು ಭಯಭೀತರಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಸ್ಥೈರ್ಯ, ಧೈರ್ಯದಿಂದ ಇರುವಂತೆ ಚೀನಾ ಸಂದೇಶಗಳನ್ನು ಕಳುಹಿಸುತ್ತಿದೆ.
ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯರು , "ನಮಗೆ ಇಲ್ಲಿನ ಡಾರ್ಮೆಟರಿಗಳಲ್ಲಿ ಇರುವಂತೆ ತಿಳಿಸಲಾಗಿದೆ. ದಿನಕ್ಕೆ ಕೇವಲ 2ಗಂಟೆಗಳ ಕಾಲ ಮಾತ್ರ ಹೊರಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಆದರೆ ಆ ಸಂದರ್ಭದಲ್ಲಿ ಏನೂ ಮಾಡಲು ಆಗುವುದಿಲ್ಲ. ಅಗತ್ಯ ವಸ್ತು ಖರೀದಿ ಮಾಡಲು ಇಲ್ಲಿನ ಎಲ್ಲಾ ಅಂಗಡಿ, ವ್ಯಾಪಾರ ಮಳಿಗೆಗಳು, ಸಾರಿಗೆ ಸಂಪರ್ಕ ಎಲ್ಲಾವೂ ಬಂದ್ ಆಗಿದೆ. ಇನ್ನೇನು ಕೆಲವೇ ಸಮಯದಲ್ಲಿ ನಮಗೆ ನೀರು, ಆಹಾರವಿಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ ಎಂದು ವಿದ್ಯಾರ್ಥಿ ಗೌರವ್ ನಾಥ್ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಮೆಟೀರಿಯಲ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವ್ಯಾಸಂಗಕ್ಕೆ ವುಹಾನ್ ವಿಶ್ವ ವಿದ್ಯಾಲಯಕ್ಕೆ ತೆರಳಿರುವ ಎಂಟು ಮಂದಿ ಈಗ ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ. ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ತಮ್ಮ ಸಂಪರ್ಕದಲ್ಲಿದ್ದು, ಭಾರತ ಸರ್ಕಾರ ಶೀಘ್ರವೇ ಇಲ್ಲಿಂದ ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ವುಹಾನ್ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಅಲ್ಲಿನ ಜನರು ಸರಿಯಾಗಿ ಬೆಳಿಗ್ಗೆ ಎಂಟು ಗಂಟೆಗೆ ಕಿಟಕಿಗಳನ್ನು ತೆಗೆದು 'ವುಹಾನ್ ಕಮಾನ್' ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಾರೆ. ಬಳಿಕ ಬಾಗಿಲು ಮುಚ್ಚುಕೊಂಡು ಮರು ದಿನ ಬೆಳಿಗ್ಗೆ 8 ಗಂಟೆಗೆ ಬಾಗಿಲು ತೆರೆಯುವುದು. ಮತ್ತೆ ಅದೇ ಘೋಷಣೆ ಕೂಗುತ್ತಾರೆ.
ಇನ್ನೂ ಕೆಲವರು ರಾಷ್ಟ್ರಗೀತೆ ಹಾಡಿದರೆ, ಮನೆಯಲ್ಲಿಯೇ ಕುಳಿತು ಹಳೆಯ ಜನಪ್ರಿಯ ಗೀತೆಗಳನ್ನು ಹಾಡುತ್ತಿದ್ದಾರೆ. ಹಾಗೆಯೇ ನಾವು ದೈರ್ಯದಿಂದ ಇರೋಣ ಪರಿಸ್ಥಿತಿಯನ್ನು ಎದುರಿಸೋಣ ಎಂಬ ಸಂದೇಶವನ್ನು ಮೊಬೈಲ್ನಲ್ಲಿ ಕಳುಹಿಸುತ್ತಿದ್ದಾರೆ.
ಭಾರತೀಯರ ಸ್ಥಳಾಂತರಕ್ಕೆ ವಿಮಾನ ಸಿದ್ಧ - ಈ ಮಧ್ಯೆ ಮಂಗಳವಾರ ವಿದೇಶಾಂಗ ಇಲಾಖೆ ಭಾರತೀಯರನ್ನು ಸ್ಥಳಾಂತರ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲೂ ಚೀನಾಕ್ಕೆ ತೆರಳಲಿದೆ. ಆ ಬಳಿಕ ಅಲ್ಲಿನ ಜನರನ್ನು ಭಾರತಕ್ಕೆ ಸ್ಥಳಾಂತರಿಸುವ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.
ಈಗಾಗಲೆ ಜಪಾನ್ ತನ್ನ ದೇಶದ 200 ಮಂದಿ, ಅಮೆರಿಕಾ 240 ಮಂದಿಯನ್ನು ವಿಮಾನದ ಮೂಲಕ ಚೀನಾದಿಂದ ಕರೆಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು "ಶೀಘ್ರವೇ ಚೀನಾದಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆಸಿಕೊಳ್ಳುತ್ತೇವೆ. ಭಾರತ ಚೀನಾದೊಂದಿಗೆ ಸಂಪರ್ಕದಲ್ಲಿದೆ" ಎಂದು ತಿಳಿಸಿದ್ದಾರೆ.
ಕೊರೋನಾ ವೈರಸ್ ಕುರಿತು ಟ್ವೀಟ್ ಮಾಡಿರುವ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು, "ಕೊರೋನಾ ಒಂದು ರಾಕ್ಷಸ ವೈರಸ್. ಇದರಿಂದಾಗಿ ಕೋಟಿಗೂ ಹೆಚ್ಚು ಮಂದಿ ಈಗ ಚೀನಾದಲ್ಲಿ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಈ ರೋಗ ಮೊದಲು ವುಹಾನ್ ನಗರದಲ್ಲಿ ಪತ್ತೆಯಾಗಿದೆ. ಚೀನಾದಲ್ಲಿ ಈ ವೈರಸ್ನಿಂದಾಗಿ ಈಗಾಗಲೇ 132 ಮಂದಿ ಮೃತಪಟ್ಟಿದ್ದು 6 ಸಾವಿರಕ್ಕೂ ಹೆಚ್ಚು ಮಂದಿಗೆ ಈ ವೈರಸ್ ತಗುಲಿದೆ ಎಂದು ವರದಿಗಳು ತಿಳಿಸಿವೆ.