ನವದೆಹಲಿ, ಜ 29 (Daijiworld News/MB) : ರಾಷ್ಟ್ರಪತಿಯು ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್ ಕುಮಾರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕಾರ ಮಾಡಿದ ಹಿನ್ನಲೆಯಲ್ಲಿ ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಆರ್.ಭಾನುಮತಿ ನೇತೃತ್ವದ ನ್ಯಾಯಪೀಠವು ತಿರಸ್ಕಾರ ಮಾಡಿದೆ.
ನ್ಯಾ.ಆರ್ ಭಾನುಮತಿ ನೇತೃತ್ವದ ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ, "ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡಿದರೆಂದರೆ ಅವರು ಅರ್ಜಿಯ ಬಗ್ಗೆ ಕಡೆಗಣಿಸಲಾಗಿದೆ ಎಂದಲ್ಲ. ರಾಷ್ಟ್ರಪತಿಗಳು ಆತುರದಲ್ಲಿ ನಿರ್ಧಾರ ಮಾಡಿಲ್ಲ. ಪ್ರಕರಣದಲ್ಲಿ ಕೋರ್ಟ್ ಪ್ರವೇಶ ಅಗತ್ಯವಿರಲಿಲ್ಲ, ಅಪರಾಧಿ ಸಲ್ಲಿಸಿರುವ ಅರ್ಜಿಯಲ್ಲಿ ಹುರುಳಿಲ್ಲ" ಎಂದು ಹೇಳಿದೆ.
ನಾಲ್ವರು ಅಪರಾಧಿಗಳಾದ ಅಕ್ಷಯ್, ಮುಕೇಶ್, ವಿನಯ್ ಶರ್ಮಾ, ಪವನ್ ಗುಪ್ತಾ ದೆಹಲಿಯ ತಿಹಾರ್ ಜೈಲಿನಲ್ಲಿ ಫೆ. 1ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸುವ ಬಗ್ಗೆ ಈ ಹಿಂದೆ ಸಮಯ ನಿಗದಿ ಮಾಡಲಾಗಿದೆ.