ಬೆಂಗಳೂರು, ಜ.29 (Daijiworld News/PY) : "ರಾಜ್ಯ ಸಚಿವ ಸಂಪುಟ ಶೀಘ್ರವೇ ವಿಸ್ತರಣೆಯಾಗಲಿದೆ. ಬಿಜೆಪಿ ಹಾಗೂ ಸಿಎಂ ಬಿ.ಎಸ್.ವೈ ಅವರು ಕೊಟ್ಟ ಮಾತಿನಂತೆ ಉಪ ಚುನಾವಣೆಯಲ್ಲಿ ಸೋಲನುಭವಿಸಿದ ಶಾಸಕರು ಸೇರಿದಂತೆ ಎಲ್ಲಾ 17 ಜನರಿಗೂ ಸಚಿವ ಸ್ಥಾನ ನೀಡುವ ಭರವಸೆ ಇದೆ" ಎಂದು ಕೆ.ಆರ್. ಪೇಟೆ ಶಾಸಕ ನಾರಾಯಣ್ ಗೌಡ ಹೇಳಿದ್ಧಾರೆ.
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ನಾರಾಯಣ ಗೌಡ ಅವರು, "ಜ.30 ಗುರುವಾರದಂದು ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಸಚಿವ ಸ್ಥಾನ ನೀಡಲು ತಡವಾಗುತ್ತಿರುವ ವಿಚಾರವಾಗಿ ಬೇಸರವಿಲ್ಲ. ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ" ಎಂದರು.
"ಉಪ ಚುನಾವಣೆಯಲ್ಲಿ ಸೋಲನುಭವಿಸಿರುವ ಶಾಸಕರನ್ನೂ ಸೇರಿ ಎಲ್ಲಾ 17 ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ಸಂಪುಟ ವಿಸ್ತರಣೆ ಒಂದೆರಡು ದಿನ ವ್ಯತ್ಯಾಸವಾದರೆ ತೊಂದರೆಯಿಲ್ಲ. ನಾವೆಲ್ಲರೂ ಜೊತೆಯಾಗಿಯೇ ಇದ್ದೇವೆ. ಹೀಗಾಗಿ ಬಿಜೆಪಿ ಹಾಗೂ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ತಿಳಿಸಿದರು.