ಕಲಬುರಗಿ, ಜ 29 (Daijiworld News/MB) : ನನ್ನ ಮುಖನೂ ಮಿಣಿ ಮಿಣಿ ಅಂತಿದೆ, ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ, ಮಿಣಿ ಮಿಣಿ ಎಂದು ಹೇಳಿದರೆ ತಪ್ಪಾಗಿ ಬಿಡುತ್ತದಾ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಮಿಣಿ ಮಿಣಿಯ ಕುರಿತು ತಿಳಿದಿಲ್ಲ. ಕುಮಾರಸ್ವಾಮಿಯವರು ನಮ್ಮ ರಾಜ್ಯ ಮಾಜಿ ಮುಖ್ಯಮಂತ್ರಿ. ನಮ್ಮ ಪಕ್ಕದ ಕ್ಷೇತ್ರದವರು, ನಾವು ಅವರ ಕೈಕೆಳಗೆ ಕೆಲಸ ಮಾಡಿದವರು. ಬಿಜೆಪಿ ನಾಯಕರು ಹಲವು ಮಾತುಗಳನ್ನು ಆಡುತ್ತಾರೆ. ಅವರು ಹೇಳಿದ ಮಾತನ್ನು ಯಾರೂ ಈ ರೀತಿ ಮಾಡಲ್ಲ. ಆದರೆ ಕುಮಾರಸ್ವಾಮಿ ಮಿಣಿಮಿಣಿ ಪೌಡರ್ ವಿಚಾರ ಅಪಹಾಸ್ಯ ಮಾಡುತ್ತಾರೆ ಅದು ಸರಿಯಲ್ಲ ಎಂದು ಹೇಳುವ ಮೂಲಕ ಹೆಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ನಿಂತಿದ್ದಾರೆ.
ದೇಶದಲ್ಲಿ ಹಲವು ಸಮಸ್ಯೆಗಳಿವೆ, ಅನುದಾನದ ಬಗ್ಗೆ, ಅಭಿವೃದ್ಧಿ ಬಗ್ಗೆ, ಯುವಕರು, ದ್ವೇಷ ಸಾಧನೆ, ಕೇಸು ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಿಣಿ ಮಿಣಿ ಎಂದು ಹೇಳಿದ್ದಾರೆ ಎಂದು ಅದನ್ನು ಮಾತನಾಡಿಕೊಳ್ಳುತ್ತಾರೆ. ಮಿಣಿ ಮಿಣಿ ಎಂದರೆ ತಪ್ಪಾಗುತ್ತಾ? ನನ್ನ ಮುಖನೂ ಮಿಣಿ ಮಿಣಿ ಅಂತಿದೆ, ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಅದಕ್ಕೆ ಏನು ಮಾಡೋಕೆ ಆಗುತ್ತೆ. ಅದೊಂದು ವಿಷಯವ ಎಂದು ಪ್ರಶ್ನೆ ಮಾಡಿದರು.
ನಾನು ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ಅರ್ಜಿ ಹಾಕಿಲ್ಲ, ಆಕಾಂಕ್ಷಿನೂ ಅಲ್ಲ. ಪ್ರಸ್ತುತ ದಿನೇಶ ಗುಂಡೂರಾವ್ ಅವರು ನಮ್ಮ ನಾಯಕರು ಅವರೇ ಅಧ್ಯಕ್ಷರಾಗಿದ್ದಾರೆ. ಅವರು ರಾಜೀನಾಮೆ ನೀಡಿದರೂ ಅದನ್ನು ಪಕ್ಷದ ವರಿಷ್ಠರು ಅಂಗೀಕರಿಸಿಲ್ಲ. ಹಾಗಾಗಿ ಕೆಪಿಸಿಸಿ ಹುದ್ದೆ ಸಹ ಖಾಲಿ ಇಲ್ಲ. ಇನ್ನು ಆ ಹುದ್ದೆಯೇ ಕೇಳಿಲ್ಲ ಅಂದ್ರೆ ಯಾರು ತಾನೇ ಅಡ್ಡಗಾಲು ಹಾಕಲು ಸಾಧ್ಯ ಎಂದು ಹೇಳಿದರು.