ಬೆಂಗಳೂರು, ಜ.29 (Daijiworld News/PY) : ಕೊನೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಖಾಲಿ ಮಾಡಿ ನೂತನ ಬಂಗಲೆಗೆ ಪ್ರವೇಶಿಸಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಸಿಎಂ ಸ್ಥಾನ ಕಳೆದುಕೊಂಡಿದ್ದರೂ ಸಿದ್ದರಾಮಯ್ಯ ಅವರು ಅದೇ ನಿವಾಸದಲ್ಲಿ ವಾಸವಿದ್ದರು.
ಈ ವಿಚಾರವಾಗಿ ಸಿದ್ದರಾಮಯ್ಯ ಅವರು ಆ ಮನೆಯನ್ನು ತಕ್ಷಣವೇ ಖಾಲಿ ಮಾಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಆದರೆ, ಮನೆ ಖಾಲಿ ಮಾಡಲು ಒಪ್ಪದ ಸಿದ್ದರಾಮಯ್ಯ ಆ ಮನೆಯನ್ನು ಪುನಃ ತನಗೆ ಮಂಜೂರು ಮಾಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದರು. ಆದರೆ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಸಿದ್ದರಾಮಯ್ಯ ಅವರ ಬೇಡಿಕೆಯನ್ನು ನಿರಾಕರಿಸಿತ್ತು. ಹಾಗಾಗಿ ಬುಧವಾರ ಸಿದ್ದರಾಮಯ್ಯ ಅವರು ತಮ್ಮ ಕಾವೇರಿ ನಿವಾಸವನ್ನು ತೆರವುಗೊಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ತೆರವುಗೊಳಿಸಿದ್ದು, ಇದೀಗ ಗಾಂಧಿ ಭವನದ ಹಿಂಭಾಗದಲ್ಲಿರುವ ನೂತನ ಮನೆಗೆ ಪ್ರವೇಶ ನೀಡಿದ್ದಾರೆ. ಪ್ರವೇಶಕ್ಕೂ ಮೊದಲು ಕುಟುಂಬಸ್ಥರು ವಿಶೇಷ ಪೂಜೆ ನಡೆಸಿದ್ದು, ಮನೆಯ ದ್ವಾರದ ಎದುರು ಬೂದು ಕುಂಬಳ ಕಾಯಿಯನ್ನು ಒಡೆದು ನೂತನ ಮನೆಗೆ ಪ್ರವೇಶಿಸಿದ್ದಾರೆ.
ಈ ಮನೆಯನ್ನು ಸಿದ್ದರಾಮಯ್ಯ ಅವರ ಅದೃಷ್ಟದ ಮನೆಯೆಂದು ಹೇಳಲಾಗುತ್ತಿದೆ. ಸಿಎಂ ಆಗುವ ಮೊದಲು ಸಿದ್ದರಾಮಯ್ಯ ಅವರು ಇದೇ ನಿವಾಸದಲ್ಲಿ ವಾಸವಿದ್ದರು. 2013ರ ಚುನಾವಣೆ ಎದುರಿಸಿ ಸಿದ್ದರಾಮಯ್ಯ ಅವರು ಸಿಎಂ ಪಟ್ಟಕ್ಕೇರಿದ್ದರು.