ಮುಂಬೈ, ಜ 29 (Daijiworld News/MSP): ಇಬ್ಬರು ಶ್ರೇಷ್ಠ ಕೈಗಾರಿಕೋದ್ಯಮಿಗಳು ಜೊತೆ ಸೇರಿದ ಅಪೂರ್ವ ಕ್ಷಣ ಕಾರ್ಪೊರೇಟ್ ಇತಿಹಾಸದಲ್ಲಿ ದಾಖಲಾಗಿದೆ. ಮುಂಬೈನಲ್ಲಿ ಮಂಗಳವಾರ ಟೈಕಾನ್ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಅಪರೂಪದ ಸಮಾಗಮ ನಡೆದಿದ್ದು ಇದು ಇಂಟರ್ ನೆಟ್ ಲೋಕದಲ್ಲಿ ನೆಟ್ಟಿಗರ ಮನಗೆದ್ದಿದೆ. ಈ ಅಪರೂದ ಕ್ಷಣದ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮುಂಬೈನಲ್ಲಿ ಮಂಗಳವಾರ ಟೈಕಾನ್(TiECon) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ಜೀವನ್ಮಾನದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಪೋರೆಟ್ ಜಗತ್ತಿನಲ್ಲಿ ತಮ್ಮ ಮೌಲ್ಯಗಳಿಗೆ ಹೆಸರುವಾಸಿಯಾಗಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಶ್ರೀ ನಾರಾಯಣ್ ಮೂರ್ತಿ ಅವರು ರತನ್ ಟಾಟಾ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ನೀಡಲು ವೇದಿಕೆಯ ಮೇಲೆ ಆಗಮಿಸಿರುವ 73 ವರ್ಷದ ನಾರಾಯಣ್ ಮೂರ್ತಿ, 83 ವರ್ಷದ ರತನ್ ಟಾಟಾ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿ ಅವರ ಆಶೀರ್ವಾದ ಪಡೆದಿದ್ದಾರೆ.
ಆ ಕ್ಷಣದ ವೀಡಿಯೊವನ್ನು ರತನ್ ಟಾಟಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರೀತಿಯಿಂದ ಹಂಚಿಕೊಂಡಿದ್ದಾರೆ. ವರದಿಯ ಪ್ರಕಾರ,ರತನ್ ಟಾಟಾ ಅವರಿಗೆ ಟೈಕಾನ್ ನ ಮುಂಬೈನ 11 ನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.