ಬಾಗಲಕೋಟೆ, ಜ 29 (Daijiworld News/MB) : 'ಮಹಾತ್ಮ ಗಾಂಧೀಜಿಯವರು ಮಾಡಿದ ತಪ್ಪಿನಿಂದಾಗಿ ಅಯೋಗ್ಯ ಜವಹರ್ ಲಾಲ್ ನೆಹರು ದೇಶದ ಮೊದಲ ಪ್ರಧಾನಿಯಾದರು' ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಬಾಗಲಕೋಟೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರಿಗೆ ಪ್ರಧಾನಿಯಾಗಲು ಬೇಕಾದ ಬಹುಮತವಿತ್ತು. ಆದರೆ ಗಾಂಧೀಜಿ ಅವರ ಮಧ್ಯ ಪ್ರವೇಶದಿಂದ ಅಯೋಗ್ಯ ನೆಹರು ಪ್ರಧಾನಿಯಾದರು" ಎಂದು ಹೇಳಿದರು.
"ನೆಹರು ಶ್ರೀಮಂತ ಕುಟುಂಬದವನಾಗಿದ್ದು ಅವನು ವಿಲಾಸಿ ಜೀವನ ನಡೆಸುತ್ತಿದ್ದ. ಅವನಿಗೆ ಬೇಕಾದ ಸಿಗರೇಟ್ ಲಂಡನ್ನಿಂದ ಬರುತ್ತಿತ್ತು. ಅವರ ಎಲ್ಲಾ ಬಟ್ಟೆಗಳನ್ನು ಲಂಡನ್ನಲ್ಲಿ ಇಸ್ತ್ರಿ ಮಾಡಲಾಗುತಿತ್ತು. ಹಾಗಾಗಿ ಅವರಿಗೆ ಬಡವರು ಹಾಗೂ ಸಾಮಾನ್ಯರ ಜೀವನದ ಬಗ್ಗೆ ಯಾವುದೇ ಭಾವನೆ ಇರಲಿಲ್ಲ. ನೆಹರು ಬಡವರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಿಲ್ಲ. ಅವರು ಅಧಿಕಾರ ದುರ್ಬಳಕೆ ಮಾಡುವುದರಲ್ಲೇ ಭಿಝಿಯಾಗಿದ್ದರು" ಎಂದು ಏಕವಚನದಲ್ಲಿ ಟೀಕೆ ಮಾಡಿದ್ದಾರೆ.
"ಬಡವರ ಬಗ್ಗೆ ಕಾಳಜಿ ಹೊಂದಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವಿನ ಬಗ್ಗೆ ತನಿಖೆಯನ್ನೇ ನಡೆಸಿಲ್ಲ" ಎಂದು ಯಾತ್ನಾಳ್ ಹೇಳಿದರು.