ನವದೆಹಲಿ, ಜ 29 (Daijiworld News/MB) : ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕುವಂತೆ ಚುನಾವಣಾ ಆಯೋಗ ಬಿಜೆಪಿಗೆ ಆದೇಶ ಮಾಡಿದೆ.
ಚುನವಾಣಾ ಪ್ರಚಾರದ ಸಂದರ್ಭದಲ್ಲಿ ಸಿಎಎ ವಿರೋಧಿ ಹೋರಾಟಗಾರರನ್ನು ಟೀಕಿಸುತ್ತಾ ಮಾತನಾಡಿದ ಅನುರಾಗ್ ಠಾಕೂರ್ ಅವರು ದೇಶದ್ರೋಹಿಗಳನ್ನು ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದರು. ಈ ಘೋಷಣೆಯ ಮೊದಲ ಭಾಗವಾದ ದೇಶದ್ರೋಹಿಗಳನ್ನು ಎಂದು ಠಾಕೂರ್ ಕೂಗಿದರೆ ಉಳಿದ ಭಾಗವಾದ ಗೋಲಿ ಮಾರೋವನ್ನು ಜನರು ಕೂಗುತ್ತಿದ್ದರು. ಅಷ್ಟು ಮಾತ್ರವಲ್ಲದೇ ಠಾಕೂರ್ ಅವರು ಈ ಘೋಷಣೆಯನ್ನು ಕೂಗುವಂತೆ ಎರಡು ಕೈ ಮೇಲಕ್ಕೆ ಎತ್ತಿ ಉತ್ಸಾಹಿಸುತ್ತಿದ್ದರು.
ಈ ಕುರಿತು ಹೇಳಿಕೆ ನೀಡಿದ ಠಾಕೂರ್, "ಗುಂಡಿಕ್ಕಿ ಎಂದು ಕೂಗಿರುವುದು ನಾನಲ್ಲ" ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಠಾಕೂರ್ ಅವರು ಈ ರೀತಿ ಘೋಷಣೆ ಕೂಗುವಂತೆ ಘೋಷಣೆಯ ಅರ್ಧ ಭಾಗವನ್ನು ಕೂಗಿ ಜನರನ್ನು ಪ್ರೋತ್ಸಾಹ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
ಈಗ ಚುನಾವಣಾ ಆಯೋಗ ಈ ಕಾರ್ಯಕ್ರಮದ ವಿಡಿಯೋ ಪರಿಶೀಲಿಸಿ ಕ್ರಮ ಕೈಗೊಂಡಿದೆ.
ಹಾಗೆಯೇ ಪರ್ವೇಶ್ ವರ್ಮಾ ಅವರು, ದೆಹಲಿಯಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಒಂದು ಗಂಟೆಯಲ್ಲಿ ಶಾಹೀನ್ ಬಾಗ್ನ್ನು ಧ್ವಂಸ ಮಾಡಲಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಚುನಾವಣಾ ಆಯೋಗ ಅವರರಿಗೆ ನೋಟಿಸ್ ಜಾರಿ ಮಾಡಿದೆ.
ಈ ಇಬ್ಬರೂ ನಾಯಕರನ್ನು ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕುವಂತೆ ಚುನಾವಣಾ ಆಯೋಗ ಬಿಜೆಪಿಗೆ ನಿರ್ದೇಶನ ನೀಡಿದೆ.