ಬೆಳಗಾವಿ, ಜ.29 (Daijiworld News/PY) : "ಮೂವರೂ ಡಿಸಿಎಂ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ನೂತನವಾಗಿ ಇನ್ನು ಯಾರನ್ನೂ ಉಪಮುಖ್ಯಮಂತ್ರಿ ಮಾಡುವುದಿಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಸ್ತುತ ಇರುವ ಮೂವರೂ ಡಿಸಿಎಂ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ನೂತನವಾಗಿ ಇನ್ನು ಯಾರನ್ನೂ ಉಪಮುಖ್ಯಮಂತ್ರಿ ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ.
"ಸಚಿವ ಸಂಪುಟದ ವಿಚಾರವಾಗಿ ಚರ್ಚೆ ನಡೆಸಲು ಜ.30 ಗುರುವಾರದಂದು ನವದೆಹಲಿಗೆ ಹೋಗುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಲಿದ್ದೇವೆ. ಅವರು ಸೂಚನೆ ನೀಡಿದರೆ ಒಂದಿಬ್ಬರನ್ನು ಸಂಪುಟದಿಂದ ಕೈಬಿಡಬೇಕಾಗುತ್ತದೆ. ಸಚಿವ ಸಂಪುಟ ವಿಸ್ತರಣೆಯನ್ನು 2-3 ದಿನಗಳಲ್ಲಿ ಮಾಡಲಾಗುವುದು. ಈಗಾಗಲೇ ಸಚಿವ ಸಂಪುಟ ವಿಸ್ತರಣೆ ತಡವಾಗಿದೆ. ಚರ್ಚೆ ನಡೆಸಿದ ಬಳಿಕ ಎಲ್ಲ ಗೊಂದಲಗಳಿಗೂ ಉತ್ತರ ಸಿಗಲಿದೆ" ಎಂದರು.
"ದೆಹಲಿಗೆ ಹೋದಾಗ ಸಚಿವರೊಂದಿಗೆ ಮಹದಾಯಿ ಸೇರಿದಂತೆ ಅಂತರ್ರಾಜ್ಯ ವಿವಾದಗಳ ವಿಚಾರವಾಗಿಯೂ ಚರ್ಚೆ ನಡೆಸುತ್ತೇನೆ. ಇದರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ಹಾಗೂ ಎರಡು ತಿಂಗಳಿಗೊಮ್ಮೆ ಇಲ್ಲಿ ಸಚಿವ ಸಂಪುಟ ಸಭೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ" ಎಂದು ಹೇಳಿದರು.
ಈ ಸಂದರ್ಭ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇದ್ದರು.