ಗುಜರಾತ್, ಜ 29 (Daijiworld News/MSP): ಕೊನೆಗೂ ಮಧ್ಯವಯಸ್ಕ ಜೋಡಿ ಹಕ್ಕಿಗಳು ಹಿಂದಿರುಗಿದ್ದಾರೆ.! ಹೌದು ಗುಜರಾತ್ನಲ್ಲಿ ತಮ್ಮ ಮಕ್ಕಳ ಮದುವೆ ಮಾಡಿಸಬೇಕಾಗಿದ್ದ ಕೆಲವೇ ವಾರಗಳ ಮೊದಲು ಓಡಿಹೋದ ಮಧ್ಯವಯಸ್ಕ ದಂಪತಿಗಳು ಜ. 26 ರಂದು ಕೊನೆಗೂ ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ.
ವಧುವಿನ ತಂದೆಯೊಂದಿಗೆ ವರನ ತಂದೆ ಪರಾರಿಯಾಗಿದ್ದ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಮಕ್ಕಳ ಮದುವೆ ಮಾಡುವುದನ್ನು ಬಿಟ್ಟು ವರನ ತಂದೆ ಹಿಮ್ಮತ್ ಪಟೇಲ್ (43) ಮತ್ತು ವಧುವಿನ ತಾಯಿ ಶೋಭನಾ ರಾವಲ್ (42) ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಎರಡು ಕುಟುಂಬದವರೂ ಪೊಲೀಸರು ದೂರು ದಾಖಲಿಸಿದ್ದರು.
ಕತಾರ್ಗ್ರಾಮ್ನ ಹಿಮ್ಮತ್ ಪಟೇಲ್ ಹಾಗೂ ವೇಜಾಲ್ಪೋರ್ನ ರಾವಲ್ ಇಬ್ಬರಿಗೂ ಚಿಕ್ಕಂದಿನಿಂದಲೇ ಪರಿಚಯವಿತ್ತು. ಈ ನಡುವೆ ಎರಡೂ ಕುಟುಂಬಗಳ ಮಧ್ಯೆ ಇವರ ಮಕ್ಕಳ ವಿವಾಹ ಸಂಬಂಧ ಏರ್ಪಟ್ಟಿತ್ತು. ಮಕ್ಕಳ ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ವರನ ತಂದೆ ಹಿಮ್ಮತ್ ಪಟೇಲ್ ಮತ್ತು ವಧುವಿನ ತಾಯಿ ಶೋಭನಾ ರಾವಲ್ ಮಧ್ಯೆ ಇದ್ದ ಹಳೆಯ ಪ್ರೇಮ ಮತ್ತೆ ಚಿಗುರಿ ಇಬ್ಬರೂ ನಾಪತ್ತೆಯಾಗಿದ್ದರು.
"ಜ. 10 ರಂದು ನಾಪತ್ತೆಯಾದ ಬಳಿಕ, ಪಟೇಲ್ ಮತ್ತು ಶೋಭನಾ ರಾವಲ್ ಜ. 26 ರಂದು ಕ್ರಮವಾಗಿ ಸೂರತ್ ಮತ್ತು ನವಸಾರಿ ಪೊಲೀಸರ ಮುಂದೆ ಹಾಜರಾದರು. ಈ ಅವಧಿಯಲ್ಲಿ ಇಬ್ಬರೂ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದ್ದರು. ಶೋಭನಾ ವಾಪಾಸ್ ಆದ ಬಳಿಕ ಅವರ ಪತಿ ಅವಳನ್ನು ಮನೆಗೆ ಸೇರಿಸಲು ನಿರಾಕರಿಸಿದ್ದರಿಂದ ಅವರು ತನ್ನ ತಂದೆಯ ಮನೆಯಲ್ಲಿ ನೆಲೆಸಿದ್ದಾರೆ" ನವಸಾರಿ ಪೊಲೀಸ್ ಅಧೀಕ್ಷಕ ಗಿರೀಶ್ ಪಾಂಡ್ಯ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಮಾತನಾಡಿದ ಸಂಬಂಧಿಯೊಬ್ಬರು “ ಪಟೇಲ್ ತನ್ನ ಮಗನಿಗಾಗಿ ರಾವಲ್ ಮಗಳ ಸಂಬಂಧ ನೋಡಿ ವಿವಾಹವಾಗಲು ಸಿದ್ಧತೆಗಳು ನಡೆಯುತ್ತಿರುವಾಗ ಒಬ್ಬರಿಗೊಬ್ಬರು ತಿಳಿದಿದ್ದರಿಂದ, ಅವರಿಬ್ಬರ ಮಧ್ಯೆ ಇದ್ದ ಹಳೆಯ ಪ್ರೀತಿ ಚಿಗುರಿ ಅಂತಿಮವಾಗಿ ಓಡಿಹೋದರು. ಇವರಿಬ್ಬರ ಮಕ್ಕಳ ಮದುವೆ ಫೆಬ್ರವರಿ ಎರಡನೇ ವಾರದಲ್ಲಿ ನಿಗದಿಯಾಗಿತ್ತು. ಮದುವೆಗೆ ಸಿದ್ಧತೆಗಳಲ್ಲಿ ಎರಡೂ ಕುಟುಂಬಗಳು ನಿರತರಾಗಿದ್ದಾಗ ಇವರಿಬ್ಬರೂ ನಾಪತ್ತೆಯಾದ ಪರಿಣಾಮ ಮಕ್ಕಳ ಮದುವೆ ನಿಂತುಹೋಗಿದೆ " ಎಂದಿದ್ದಾರೆ