ಮುಂಬೈ, ಜ.29 (Daijiworld News/PY) : ಯಾವುದೇ ದೇಶ ವಿರೋಧಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದಾಗಲಿ, ಕಾಲೇಜು ಆವರಣದಲ್ಲಿ ಕರಪತ್ರಗಳನ್ನು ಹಂಚುವುದಾಗಲಿ ಮಾಡಬಾರದು ಎಂದು ಐಐಟಿ ಬಾಂಬೆ ಸುತ್ತೋಲೆಯನ್ನು ಹೊರಡಿಸಿದೆ.
ಈ ಸುತ್ತೋಲೆಯನ್ನು ವಿದ್ಯಾರ್ಥಿ ವ್ಯವಹಾರಗಳ ಸಹಾಯಕ ಡೀನ್ ಅವರು ಇ–ಮೇಲ್ ಮೂಲಕ ಕಳುಹಿಸಿದ್ದು, ಈ ಸುತ್ತೋಲೆಯಲ್ಲಿ ಒಟ್ಟು 15 ನಿಯಮಗಳನ್ನು ಪಟ್ಟಿ ಮಾಡಲಾಗಿದ್ದು, ಹಾಸ್ಟೆಲ್ನ ಶಾಂತ ವಾತಾವರಣ ಹದಗೆಡಿಸುವ ನಾಟಕ, ಸಂಗೀತಾ ಮತ್ತು ಭಾಷಣ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಹಾಸ್ಟೆಲ್ ಮೇಲ್ವಿಚಾರಕರ ಅಥವಾ ಡೀನ್ ಅನುಮತಿಯಿಲ್ಲದೆ ಹಾಸ್ಟೆಲ್ನಲ್ಲಿ ಯಾವುದೇ ಪೋಸ್ಟರ್ ಅಥವಾ ಕರಪತ್ರ ಹಂಚುವಂತಿಲ್ಲ ಎಂಬ ನಿಯಮಗಳನ್ನು ಸುತ್ತೋಲೆಯಲ್ಲಿ ಬರೆಯಲಾಗಿದೆ.
ಕ್ಯಾಂಪಸ್ನಲ್ಲಿ ಡೀನ್ ಒಪ್ಪಿಗೆ ಪಡೆದ ವಿಷಯಗಳಿಗಷ್ಟೇ ಅನುಮತಿ ದೊರೆಯುತ್ತದೆ. ತಕ್ಷಣದಿಂದ ಜಾರಿಗೆ ಬರುವ ಈ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸಿದರೆ, ಹಾಸ್ಟೆಲ್ನಿಂದ ಭಾಗಶಃ ಅಥವಾ ಶಾಶ್ವತವಾಗಿ ಅಮಾನತು ಮಾಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಾಲೇಜಿನ ಈ ತೀರ್ಮಾನದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ದೇಶದಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಐಐಟಿ ಬಾಂಬೆ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದರಿಂದ ಈ ರೀತಿಯ ನಿಯಮಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದು ದೇಶ ವಿರೋಧಿ, ಸಮಾಜ ವಿರೋಧಿ ಚಟುವಟಿಕೆ ಎಂಬುದರ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲ. ಯಾವುದಕ್ಕೆ ಅನುಮತಿ ಇದೆ, ಯಾವುದಕ್ಕೆ ಇಲ್ಲ ಎಂಬುದನ್ನು ನಾನು ಇನ್ನೂ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯವನ್ನು ಕಾಲೇಜು ಆಡಳಿತ ಮಂಡಳಿ ಮಾಡುತ್ತಿರುವುದು ಅತ್ಯಂತ ಬೇಸರದ ವಿಷಯ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು.