ಬೆಂಗಳೂರು, ಜ 29 (Daijiworld News/MSP): ಬೆಳಗಾವಿಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರ ಮಠಕ್ಕೆ ದಾವಣಗೆರೆಯ ಅಪರಿಚಿತ ವ್ಯಕ್ತಿಯೋರ್ವನಿಂದ ಬೆದರಿಕೆ ಪತ್ರವೊಂದು ಜ. 24ರಂದು ರವಾನೆಯಾಗಿದ್ದು ಅದರಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ಉಲ್ಲೇಖಿಸಲಾಗಿರುವ ಹಿನ್ನೆಲೆಯಲ್ಲಿ, ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
"ಗಾಂಧಿಯನ್ನು ಕೊಂದವರೆ.. ಗೌರಿಯನ್ನು ಕೊಂದವರೆ.. ಕೊಲ್ಲ ಬಲ್ಲಿರಿ ನನ್ನನ್ನೂ. ಕೊಲ್ಲಬಲ್ಲಿರಿ ನನ್ನನ್ನೂ..ನನ್ನಂತ ಇನ್ನೂ ಹಲವರನ್ನೂ. ಆದರೆ, ಕೊಲ್ಲಲಾರಿರಿ.. ನಮ್ಮ ಮನಃಸಾಕ್ಷಿಯನ್ನು..ನಮ್ಮ ಸಂವಿಧಾನವನ್ನು..ಎಲ್ಲರನ್ನೊಳಗೊಂಡ ಭಾರತೀಯತೆಯನ್ನು..” ಎಂದು ಟ್ವಿಟ್ ಮಾಡುವ ಮೂಲಕ ನಟ ಪ್ರಕಾಶ್ ರಾಜ್ ಬೆದರಿಕೆ ಪತ್ರಕ್ಕೆ ತಿರುಗೇಟು ನೀಡಿದ್ದಾರೆ.
ಬೆಳಗಾವಿಯ ನಿಜಗುಣಾನಂದ ಸ್ವಾಮಿ ಹಾಕಿರುವ ಬೆದರಿಕೆ ಪತ್ರದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ನಟ ಪ್ರಕಾಶ್ ರಾಜ್ ಸೇರಿದಂತೆ 15 ಜನರನ್ನು ಈ ತಿಂಗಳ ಅಂತ್ಯದ ಒಳಗಾಗಿ ಸಂಹಾರ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.
ಇವರಲ್ಲದೇ ಬಜರಂಗದಳದ ಮಾಜಿ ನಾಯಕ ಮಹೇಂದ್ರ ಕುಮಾರ್, ನಿಡುಮಾಮಿಡಿ ಶ್ರೀ ಮಠದ ವೀರಭದ್ರ ಸ್ವಾಮೀಜಿ, ನಟ ಚೇತನ್ ಕುಮಾರ್, ಬಿ.ಟಿ ಲಲಿತಾ ನಾಯಕ್, ಮಹೇಶ್ ಚಂದ್ರಗುರು, ಪ್ರೊ. ಭಗವಾನ್, ಪತ್ರಕರ್ತ ಅಗ್ನಿ ಶ್ರೀಧರ್, ಬೃಂದಾ ಕಾರಟ್ ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಇವರ ಹೆಸರಗಳನ್ನು ಉಲ್ಲೇಖಿಸಲಾಗಿತ್ತು.