ಬೆಂಗಳೂರು, ಜ.29 (Daijiworld News/PY) : ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಜ.31 ರಿಂದ ಫೆ.1ರವರೆಗೆ ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ಧಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಷ್ಕರ ಕರೆಗೆ ಬೆಂಬಲ ನೀಡಿರುವ ವಿವಿಧ ಬ್ಯಾಂಕ್ಗಳ ನೌಕರರ ಒಕ್ಕೂಟದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ಧಾರೆ.
ಶೇ.20ರಷ್ಟು ವೇತನ ಹೆಚ್ಚಳ ಹಾಗೂ ವಾರದಲ್ಲಿ 5 ದಿನ ಬ್ಯಾಂಕ್ ಕಾರ್ಯ ನಿರ್ವಹಣೆ, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಲ್ಲದೇ, ನೌಕರರ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಉತ್ತೇಜನೆ, ಸಿಬ್ಬಂದಿ ಕಲ್ಯಾಣ ವೇತನ ಏರಿಕೆ, ಎಲ್ಲರಿಗೂ ಒಂದೇ ಸಮಯ ನಿಗದಿಪಡಿಸಬೇಕು ಎಂಬುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮನವಿಯಾಗಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಈ ಹಿಂದೆಯೂ 2 ದಿನಗಳ ಬ್ಯಾಂಕ್ ಮುಷ್ಕರ ನಡೆಸಿತ್ತು. ಆ ಸಂದರ್ಭ ಕೇಂದ್ರ ಹಣಕಾಸು ಕಾರ್ಯದರ್ಶಿ ತಮ್ಮ ಸಮಸ್ಯೆಗಳ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದರು. ನಮ್ಮ ಬೇಡಿಕೆಗಳನ್ನು ಈಡೇರಿಕೆಗಾಗಿ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಜ.31ರಿಂದ ಫೆ.1ರವರೆಗೆ ಎರಡು ದಿನಗಳ ಕಾಲ ಮುಷ್ಕರ ಮಾಡಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸದಸ್ಯರು ತಿಳಿಸಿದ್ದಾರೆ.
ಜ.31ರಿಂದ ಫೆ.1ರವರೆಗೆ ಎರಡು ದಿನಗಳ ಕಾಲ ಸಾಂಕೇತಿಕವಾಗಿ ಮುಷ್ಕರ ನಡೆಯಲಿದೆ. ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸದಿದ್ದಲ್ಲಿ ಪುನಃ ಫೆ.11, 12, 13ರಂದು ಮುಷ್ಕರ ನಡೆಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೇತನ ಸಮಸ್ಯೆ ಪರಿಷ್ಕಾರ ಸೇರಿದಂತೆ ದೇಶದ ನಾಲ್ಕು ಪ್ರಮುಖ ಬ್ಯಾಂಕಿಂಗ್ ಸಿಬ್ಬಂದಿಗಳ ಒಕ್ಕೂಟಗಳು ಮುಷ್ಕರ ನಡೆಸಲಿದ್ದು, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ನೊಬೊ) ಹಾಗೂ ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್ಬಿಒಸಿ) ಈ ಮುಷ್ಕರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.