ನವದೆಹಲಿ, ಜ.29 (Daijiworld News/PY) : ಚುನಾವಣಾ ತಂತ್ರಗಾರಿಕೆಯಿಂದ ಪ್ರಸಿದ್ದಿಯಾಗಿದ್ದ ಪ್ರಶಾಂತ್ ಕಿಶೋರ್ ಅವರನ್ನು ಹಾಗೂ ಬಂಡಾಯ ನಾಯಕ ಪವನ್ ವರ್ಮಾರನ್ನು ಜೆಡಿಯು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಇಬ್ಬರೂ ಕೂಡ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರು ಈ ರೀತಿ ನಡೆದುಕೊಳ್ಳುತ್ತಿರುವುದರಿಂದ ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಹಾಗೆಯೇ ಬಿಹಾರ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ಧಾರೆ. ಹೀಗಾಗಿ, ಇವರಿಬ್ಬರನ್ನೂ ಪಕ್ಷದಿಂದ ಉಚ್ಛಾಟಿಸಿರುವುದಾಗಿ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಪೌರತ್ವ ತಿದ್ದುಪಡಿ ಮಸೂದೆಯನ್ನ ಸಂಸತ್ನಲ್ಲಿ ಬೆಂಬಲಿಸಿದೆ. ಆದರೆ, ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅವರು ಸಾರ್ವಜನಿಕವಾಗಿಯೇ ಸಿಎಎ ಹಾಗೂ ಎನ್ಆರ್ಸಿ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬಂದಿದ್ದರು. ಪಕ್ಷದ ಮುಖ್ಯಸ್ಥರನ್ನೇ ಬಿಟ್ಟು ಪ್ರಶಾಂತ್ ಕಿಶೋರ್ ಅವರೇ ಅಧಿಕೃತ ಹೇಳಿಕೆಗಳನ್ನು ಕೊಟ್ಟಿದ್ದರು. ಪ್ರಶಾಂತ್ ಕಿಶೋರ್ ಹಾಗೂ ನಿತೀಶ್ ಕುಮಾರ್ ಮಧ್ಯೆ ವಾಗ್ವದವೂ ನಡೆದಿತ್ತು. ಸಿಎಎ ವಿಚಾರದಲ್ಲಿ ರಾಷ್ಟ್ರಾದ್ಯಂತ ಅಭಿಪ್ರಾಯ ರೂಪಿಸಲು ಅವರು ಪ್ರಯತ್ನಿಸಿದ್ದರು.
ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ನಿತೀಶ್ ಕುಮಾರ್ ಜ.28 ಮಂಗಳವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅಲ್ಲಗಳೆದ ಪ್ರಶಾಂತ್ ಕಿಶೋರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಟೀಕಿಸಿದ್ದರು.
ಸಿಎಎ, ಎನ್ಆರ್ಸಿ ವಿಚಾರದಲ್ಲಿ ಎನ್ಡಿಎ ನಿಲುವಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿರುವ ನಿತೀಶ್ ಕುಮಾರ್, ಇದನ್ನು ವಿರೋಧಿಸುವವರು ಬೇಕಾದರೆ ಪಕ್ಷ ಬಿಡಲು ಸ್ವತಂತ್ರರು ಎಂದು ಹೇಳಿದ್ದರು. ಅದಾಗಿ ಒಂದೇ ದಿನದಲ್ಲಿ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅವರ ಉಚ್ಛಾಟನೆಯಾಗಿದೆ.