ಔರಂಗಬಾದ್, ಜ.29 (Daijiworld News/PY) : "ಪೌರತ್ವ ತಿದ್ದುಪಡಿ ಕಾಯ್ದೆಯು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಉರಿಯುತ್ತಿರುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದೆ" ಎಂದು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಮಹಾರಾಷ್ಟ್ರದ ಪತೇರಿಯಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಮೋದಿ ಹಾಗೂ ಅಮಿತ್ ಶಾ ಅವರು ಗುಜರಾತ್ ಚುನಾವಣೆ ವೇಳೆ ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದ್ದರು. ಈಗ ಅವರು ದೇಶದಲ್ಲಿ ಅದೇ ತಂತ್ರವನ್ನು ಅನುರಿಸುತ್ತಿದ್ಧಾರೆ" ಎಂದು ಹೇಳಿದರು.
"ಈ ಧಾರ್ಮಿಕ ಸಂಘರ್ಷವನ್ನು ಬದಿಗಿಟ್ಟು, ದೇಶದಲ್ಲಿರುವ ನಿರುದ್ಯೋಗ ಹಾಗೂ ಕುಗ್ಗಿರುವ ಆರ್ಥಿಕತೆಯ ಸ್ಥಿತಿಯ ಬಗ್ಗೆ ಜನರು ಪ್ರಸ್ತುತ ಸರ್ಕಾರವನ್ನು ಪ್ರಶ್ನಿಸಬೇಕು. ದೇಶದಲ್ಲಿರುವ ಸಮಸ್ಯೆಗಳ ವಿಚಾರವಾಗಿ ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದರೆ, ಅದಕ್ಕೆ ಪ್ರತಿಯಾಗಿ ಆತನ ಪೌರತ್ವದ ಬಗ್ಗೆ ಕೇಳಲಾಗುತ್ತಿದೆ. ಸಿಎಎ ಜನರಿಗೆ ಪೌರತ್ವ ನೀಡುವ ಬದಲು ಜನರಿಂದ ಪೌರತ್ವವನ್ನು ಕಸಿದುಕೊಳ್ಳುತ್ತಿದೆ" ಎಂದರು.