ನವದೆಹಲಿ, ಜ 30 (Daijiworld News/MB) : ಪುರುಷರ ರೀತಿಯಲ್ಲಿ ಮಹಿಳೆಯರಿಗೂ ಮಸೀದಿಯಲ್ಲಿ ನಮಾಜ್ ಸಲ್ಲಿಸಲು ಪ್ರವೇಶಕ್ಕೆ ಅನುಮತಿ ಇದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್ಬಿ) ಸುಪ್ರೀಂ ಕೋರ್ಟ್ಗೆ ಬುಧವಾರ ತಿಳಿಸಿದೆ.
ಯಾಸ್ಮೀನ್ ಝುಬೇರ್ ಅಹ್ಮದ್ ಪೀರ್ಜಾದೆ ಎನ್ನುವವರು ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು. ಮಸೀದಿಗೆ ಮಹಿಳೆಯ ಪ್ರವೇಶ ನಿಷೇಧ ಕಾನೂನು ಬಾಹಿರ ಹಾಗೂ ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಮುಸ್ಲಿಂ ಮಹಿಳೆ ನಮಾಝ್ ಅಥವಾ ಪ್ರಾರ್ಥನೆ ಮಾಡಲು ಮಸೀದಿಗೆ ಮುಕ್ತವಾಗಿ ಪ್ರವೇಶ ಮಾಡಬಹುದು. ಇದು ಮಹಿಳೆಯ ಆಯ್ಕೆ ಎಂದು ಮಂಡಳಿಯ ಕಾರ್ಯದರ್ಶಿ ಎಂ.ಆರ್. ಶಮಶಾದ್ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಪರಿಶೀಲನೆ ಮಾಡಲಿದೆ.