ನವದೆಹಲಿ, ಜ 30 (Daijiworld News/MB) : ವೈದ್ಯಕೀಯ ಕಾರಣಗಳಿಂದ ಅಥವಾ ಬೇಡದಿರುವ ಗರ್ಭಪಾತಕ್ಕೆ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸುವ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಸರ್ಕಾರವು ಫೆ.1ರಿಂದ ಶುರುವಾಗುವ ಬಜೆಟ್ ಅಧಿವೇಶನದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಗರ್ಭಪಾತ (ತಿದ್ದುಪಡಿ) ಮಸೂದೆ 2020 ಅನ್ನು ಮಂಡಿಸಿ ಅನುಮೋದನೆ ಪಡೆದು ಕೊಳ್ಳುವ ಚಿಂತನೆ ನಡೆಸಿದೆ,. ಪ್ರಸ್ತುತ 20 ವಾರಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡಲಾಗುತ್ತಿದೆ.
ಈ ನಿರ್ಧಾರದ ಕುರಿತು ವಿವರ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಅವರು, "ಪ್ರಸ್ತುತ ಗರ್ಭಪಾತ ಮಾಡಿಸಿಕೊಳ್ಳಲು 20 ವಾರಗಳ ಮಿತಿಯಿದ್ದು ಅದನ್ನು 24 ವಾರಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಶಿಶುವಿಗೆ ಜನ್ಮ ನೀಡುವ ಹಕ್ಕನ್ನು ಇನ್ನಷ್ಟು ರಕ್ಷಿಸಿದಂತಾಗಿದೆ ಎಂದು ಹೇಳಿದ್ದಾರೆ.
ಈವರಗೆ ಇದ್ದ ಮಿತಿಗಿಂತ ನಾಲ್ಕು ವಾರಗಳ ಕಾಲ ಏರಿಕೆ ಮಾಡಿದ್ದರಿಂದ ಅತ್ಯಾಚಾರ ಕ್ಕೊಳಗಾದ ಸಂತ್ರಸ್ತೆ, ಬಾಲಕಿಯರು, ಬುದ್ಧಿ ಮಾಂದ್ಯ ಯುವತಿಯರಿಗೆ ಪ್ರಯೋಜನವಾಗಲಿದೆ. ಕೆಲವು ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರು ಹಾಗೂ ಬುದ್ಧಿಮಾಂದ್ಯರಿಗೆ ತಾನು ಗರ್ಭಿಣಿಯಾಗಿರುವುದು ಮೊದಲ ಐದು ತಿಂಗಳ ಅವಧಿಯಲ್ಲಿ ತಿಳಿಯುವುದಿಲ್ಲ. ಈ ಹಿನ್ನಲೆಯಲ್ಲಿ ಅವರು ಕಾನೂನಿನ ಮೊರೆ ಹೋಗುತ್ತಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗುತ್ತದೆ. ಗರ್ಭಪಾತ ಕಾಲಮಿತಿಯನ್ನು ಹೆಚ್ಳ ಮಾಡಿರುವುದರಿಂದ ಗರ್ಭ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಕಾಲವಕಾಶವಿದೆ ಎಂದು ಹೇಳಿದ್ದಾರೆ.
ಈ ಗರ್ಭಪಾತ (ತಿದ್ದುಪಡಿ) ಮಸೂದೆ 2020 ಪ್ರಕಾರ ಗರ್ಭಪಾತ ಮಾಡಿಸುವುದರ ಬಗ್ಗೆ ಇಬ್ಬರು ತಜ್ಞರ ಅಭಿಪ್ರಾಯ ಸಲ್ಲಿಸಬೇಕು ಹಾಗೂ ಅವರು 24 ವಾರಗಳ ಅವಧಿ ಪೂರ್ತಿಯಾಗಿದೆಯೇ ಎಂಬುದನ್ನು ದೃಢಪಡಿಸಬೇಕು. ನಿಗದಿಯಾಗಿರುವ ವೈದ್ಯರ ಸಮಿತಿ ಈಗಾಗಲೇ ಭ್ರೂಣದಲ್ಲಿ ಉಂಟಾಗಿರುವ ಅಸಹಜಗಳ ಬಗ್ಗೆ ವರದಿ ನೀಡಿದಲ್ಲಿ ಹೊಸ ತಿದ್ದುಪಡಿ ಅನ್ವಯವಾಗುವುದಿಲ್ಲ. ಗರ್ಭಪಾತ ಮಾಡಲು ಬಯಸುವ ಮಹಿಳೆಯ ಯಾವುದೇ ವಿವರವನ್ನು ಕಾನೂನಿನ ಅನ್ವಯ ಸೂಚಿತ ಅಧಿಕಾರಿಗೆ ಮಾತ್ರ ನೀಡಬೇಕು.