ಬೆಂಗಳೂರು, ಜ 30 (Daijiworld News/MB) : ಜೀವನ ಮತ್ತು ಪರೀಕ್ಷೆ ಎದುರಿಸುವುದು ಹೇಗೆ, ಸವಾಲುಗಳನ್ನು ಹೇಗೆ ದೈರ್ಯವಾಗಿ ಸ್ವೀಕರಿಸಿ ನಿಭಾಯಿಸುವುದು ಎಂಬ ಮಾಹಿತಿಯುಳ್ಳ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ "ಎಕ್ಸಾಂ ವಾರಿಯರ್ಸ್" ಪುಸ್ತಕ ಇನ್ನು ಸರ್ಕಾರಿ ಶಾಲೆಗಳಲ್ಲಿ ಲಭ್ಯವಾಗಲಿದ್ದು ಎಲ್ಲಾ ಶಾಲೆಗಳಲ್ಲಿ ಈ ಪುಸ್ತಕವನ್ನು ಖರೀದಿ ಮಾಡಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮೋದಿಯವರು ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಓದಲೇಬೇಕಾಗಿದೆ. ಆ ಹಿನ್ನಲೆಯಲ್ಲಿ ಎಲ್ಲಾ ಶಾಲೆಗಳು ಶಾಲೆಯ ಸಂಚಿತ ನಿಧಿಯಿಂದ ಪುಸ್ತಕ ಖರೀದಿ ಮಾಡುವಂತೆ ಸೂಚನೆ ನೀಡಲಾಗಿದೆ.
ಹಾಗೆಯೇ ಎಸ್.ಎಸ್.ಎಲ್.ಸಿ ತರಗತಿಗಳಲ್ಲಿ 50ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢ ಶಾಲೆಗಳು ಒಂದು ಪುಸ್ತಕ ಹಾಗೂ 50 ಕ್ಕಿಂತಲೂ ಹೆಚ್ಚು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇರುವ ಸರ್ಕಾರಿ ಪ್ರೌಢ ಶಾಲೆಗಳು 02 ಪುಸ್ತಕಗಳಂತೆ ಖರೀದಿಸಬೇಕು ಎಂದು ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಸುರೇಶ್ ಕುಮಾರ್ ಅವರು ಆದೇಶ ಹೊರಡಿಸುವಂತೆ ಪತ್ರ ಬರೆದಿದ್ದಾರೆ.