ಬೀಜಿಂಗ್, ಜ.30 (Daijiworld News/PY) : ಕೊರೊನಾ ವೈರಸ್ ಭೀತಿ ವಿಶ್ವದಾತ್ಯಂತ ಹೆಚ್ಚಿದ್ದು, ಭಾರತದಲ್ಲಿಯೂ ಕೂಡಾ ಸುಮಾರು 670 ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಇದರಲ್ಲಿ ಕೇರಳದಲ್ಲಿ ಸುಮಾರು 633 ಮಂದಿಗೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ದೆಹಲಿಯಲ್ಲಿ 3, ಪಂಜಾಬ್ನಲ್ಲಿ 16, ಹರಿಯಾಣದಲ್ಲಿ 2, ಬಿಹಾರ್ನಲ್ಲಿ 1, ಮಹಾರಾಷ್ಟ್ರದಲ್ಲಿ 6, ರಾಜಸ್ಥಾನದಲ್ಲಿ 1 ಹಾಗೂ ಕರ್ನಾಟದಲ್ಲಿ 4 ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ವರದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೊನಾ ವೈರಸ್ಗೆ ಬಲಿಯಾದವರ ಸಂಖ್ಯೆ 170ಕ್ಕೇರಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇಲ್ಲಿಯವರೆಗೆ 7,700 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಕೊರೊನಾ ವೈರಸ್ ಸೋಕು ತಗುಲಿರುವ 7,700 ಮಂದಿಯಲ್ಲಿ ಸುಮಾರು 1,370 ಜನರ ಸ್ಥಿತಿ ಗಂಭೀರವಾಗಿದ್ದು, ಸುಮಾರು 12,167 ಜನರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಶಂಕಿಸಲಾಗಿದೆ. ಬೀಜಿಂಗ್ ಹಾಗೂ ಶಾಂಘೈನಲ್ಲಿ ಸುಮಾರು 100ಕ್ಕಿಂತ ಅಧಿಕ ಮಂದಿಗೆ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕೊರೊನಾ ವೈರಸ್ ಮೊದಲು ಚೀನಾದ ವುಹನ್ ಹಾಗೂ ಹುಬೈ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದು, ಈ ಪ್ರಾಂತ್ಯದಲ್ಲೇ ಸುಮಾರು 160 ಮಂದಿ ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ.ವಿಶ್ವದಾತ್ಯಾಂತ ಹರಡುತ್ತಿರುವ ಈ ವೈರಸ್ನಿಂದ ಸುಮಾರು 16 ರಾಷ್ಟ್ರದಲ್ಲಿ ಕೊರೊನಾ ವೈರಸ್ ಹರಡಿದೆ ಎಂದು ವರದಿಯಾಗಿದೆ.
ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ತೈಲ್ಯಾಂಡ್, ತೈವಾನ್, ಸಿಂಗಪೂರ್, ಮಲೇಷ್ಯಾ, ಆಸ್ಟ್ರೇಲಿಯಾ,ಸೇರಿದಂತೆ 16 ದೇಶಗಳಲ್ಲಿ ಕೊರೊನಾ ವೈರಸ್ ತಗುಲಿರುವ ಪ್ರಕರಣಗಳು ವರದಿಯಾಗಿದೆ.