ಬೆಂಗಳೂರು, ಜ.30 (Daijiworld News/PY) : ರೈಲ್ವೆ ಇಲಾಖೆಯ ನಕಲಿ ಇ-ಟಿಕೆಟ್ ಮಾರಾಟ ಜಾಲ ಪ್ರಕರಣದಲ್ಲಿ ಬಂಧಿತನಾಗಿರುವ ಹರಿಯಾಣ ಮೂಲದ ಗುಲಾಮ್ ಮುಸ್ತಫಾ ಪಾಕಿಸ್ತಾನ ಮೂಲದ ಧಾರ್ಮಿಕ ಸಂಘಟನೆಯೊಂದರ ಅನುಯಾಯಿಯಾಗಿದ್ದ ಎಂಬ ಆಘಾತಕಾರಿ ಮಾಹಿತಿಯು ತನಿಖೆ ನಡೆಸಿದ ಸಂದರ್ಭ ತಿಳಿದುಬಂದಿದೆ.
ವಿಚಾರಣೆಯ ವೇಳೆ ತನಿಖಾ ತಂಡಗಳಿಗೆ ಗುಲಾಮ್ ಮುಸ್ತಫಾನ ಒಂದೋಂದೇ ವಿಷಯಗಳು ತಿಳಿಯುತ್ತಿವೆ. ಗುಲಾಮ್ ಪಾಕಿಸ್ತಾನದ ತಬ್ಲೀಕಿ ಜಮಾತ್ ಹೆಸರಿನ ಧಾರ್ಮಿಕ ಸಂಘಟನೆಯ ಅನುಯಾಯಿ ಆಗಿದ್ದ ಎಂಬ ಮಾಹಿತಿ ತಿಳಿದಿದ್ದು ಹೀಗಾಗಿ, ಈ ಸಂಘಟನೆ ಜೊತೆಗೆ ಹಣಕಾಸು ವರ್ಗಾವಣೆಯ ವ್ಯವಹಾರ ನಡೆಸಿರುವ ಸಾಧ್ಯತೆಯಿದ್ದು ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಗುಲಾಮ್ನಿಂದ ಜಪ್ತಿ ಮಾಡಿಕೊಂಡಿರುವ ಲ್ಯಾಪ್ಟಾಪ್ನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ದುಬೈ ಸೇರಿದಂತೆ ಹಲವು ರಾಷ್ಟ್ರಗಳ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ಅಲ್ಲಿನ ಉಗ್ರ ಸಂಘಟನೆಗಳಿಗೆ ಹಣ ಪೂರೈಸಿರುವ ಬಗ್ಗೆ ಅನುಮಾನಗಳು ದಟ್ಟವಾಗುತ್ತಿದ್ದು, ಯಾವ ಸಂಘಟನೆಗಳ ಜೊತೆ ಗುಲಾಮ್ನಿಗೆ ನಿಕಟ ಸಂಪರ್ಕವಿತ್ತು ಎಂಬುದರ ವಿಚಾರವಾಗಿಯೂ ತನಿಖೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿರುವ ಇ-ಟಿಕೆಟ್ ಜಾಲದ ಹಿಂದೆ ಹಲವು ಮಂದಿ ಕಿಂಗ್ಪಿನ್ಗಳು ಕಾರ್ಯನಿರ್ವಹಿಸಿರುವ ಸಾಧ್ಯತೆಯಿದೆ. ಅವರ ಬಂಧನವಾದ ಬಳಿಕ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಗುಲಾಮ್ ಮುಸ್ತಾಫಾ ಪೀಣ್ಯ, ಬಾಗಲಕುಂಟೆಯಲ್ಲಿರುವ ಎರಡು ಖಾಸಗಿ ಬ್ಯಾಂಕ್ಗಳಲ್ಲಿ ಖಾತೆ ತೆರೆದಿದ್ದು ಹಣಕಾಸು ನಿರ್ವಹಣೆ ಮಾಡಿದ್ಧಾನೆ. ಅಲ್ಲಿನ ವ್ಯವಹಾರದ ಬಗ್ಗೆ ಮಾಹಿತಿ ಕೋರಿ ಬ್ಯಾಂಕ್ಗಳಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.