ಬೆಂಗಳೂರು, ಜ 30 (Daijiworld News/MB) : ರಾಜ್ಯದ ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗೂ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
'ಎ' ಮತ್ತು 'ಬಿ' ಶ್ರೇಣಿ ಎಂದು ವಿಭಜನೆ ಮಾಡಿ ರಾಜ್ಯದ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆಯಲಾಗಿದೆ.
ಮಾಜಿ ಸಚಿವರುಗಳಾದ ಆರ್.ದೇಶಪಾಂಡೆ, ಬಂಡೆಪ್ಪ ಕಾಶೆಂಪುರ, ಡಿ.ಸಿ. ತಮ್ಮಣ್ಣ, ರಮೇಶ ಜಾರಕಿಹೋಳಿ, ಜಿ.ಟಿ. ದೇವೆಗೌಡ ಸೇರಿ 27 ಮಂದಿಗೆ ಗನ್ ಮ್ಯಾನ್ ಭದ್ರತೆ ನೀಡಲಾಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಗನ್ ಮ್ಯಾನ್ ಹಾಗೂ ಮನೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.
ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ, ಹೆಚ್.ಡಿ ರೇವಣ್ಣ ಅವರಿಗೆ ‘Z’ ಶ್ರೇಣಿ ಭದ್ರತೆ ಮುಂದುವರಿಸಲಾಗಿದೆ ಎಂದು ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.