ನವದೆಹಲಿ, ಜ.30 (Daijiworld News/PY) : ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.23ರಂದು ಗುಜರಾತಿನ ಅಹಮದಾಬಾದ್ ನಗರಕ್ಕೆ ಆಗಮಿಸಲಿದ್ದಾರೆ ಹೇಳಲಾಗುತ್ತಿದ್ದು, ಸಾಬರ ನದಿ ದಡಕ್ಕೂ ತೆರಳಿ ನದಿಯ ಹರಿವನ್ನು ವೀಕ್ಷಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ ಎಂದು ವರದಿ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಪ್ರಥಮ ಬಾರಿ. ಟ್ರಂಪ್ ಅವರು ಭಾರತ ಪ್ರವಾಸ ಕೈಗೊಳ್ಳುಚುದು ಬಹುತೇಕ ಖಚಿತವಾಗಿದ್ದು, ಆದರೆ ನಿರ್ದಿಷ್ಟವಾಗಿ ಯಾವ ದಿನ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಉ ತಿಳಿದುಬಂದಿಲ್ಲ. ಭಾರತ ಭೇಟಿಯ ದಿನಾಂಕದ ಬಗ್ಗೆ ಭಾರತ ಹಾಗೂ ಅಮೆರಿಕ ಚರ್ಚೆ ನಡೆಸುತ್ತಿವೆ. ಈ ಮಧ್ಯೆ ಫೆ.23ರಂದು ಅಹಮದಾಬಾದ್ಗೆ ಬಂದಿಳಿಯುವ ಹಾಗೂ ಸಬರಮತಿ ನದಿಯನ್ನು ವೀಕ್ಷಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಜ.23 ಗುರುವಾರದಂದು ಉತ್ತರ ದೆಹಲಿಯ ಶಾಸ್ತ್ರಿ ನಗರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು, "ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಸಬರಮತಿ ನದಿಯ ಮುಂಭಾಗಕ್ಕೆ ಆಗಮಿಸುವುದು ಖಚಿತ" ಎಂದು ತಿಳಿಸಿದ್ದಾರೆ.
ಇದರ ಜೊತೆ ಸಬರಮತಿ ನದಿಯ ಕುರಿತು ಮಾತನಾಡಿದ ಅವರು, "ಜಪಾನ್ ಹಾಗೂ ಇಸ್ರೇಲ್ ಪ್ರಧಾನ ಮಂತ್ರಿಗಳಂತಹ ಪ್ರಮುಖ ನಾಯಕರೂ ನದಿಯ ಮುಂಭಾಗಕ್ಕೆ ಭೇಟಿ ನೀಡಿ ಆಶ್ಚರ್ಯಗೊಂಡಿದ್ದಾರೆ. ಇಡೀ ಏಷ್ಯಾದಲ್ಲೇ ಸಬರಮತಿ ಅತ್ಯಂತ ಸ್ವಚ್ಚವಾದ ನದಿಯಾಗಿ ಮಾರ್ಪಾಡಾಗಿದೆ. ಈ ವಿಚಾರದ ಬಗ್ಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಸ್ಪಷ್ಟ ಪಡಿಸಿದ್ದಾರೆ" ಎಂದು ವಿಜಯ್ ರೂಪಾನಿ ಅವರು ಹೇಳಿದ್ದಾರೆ.
ಕಳೆದ ವರ್ಷ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ವೇಳಾಪಟ್ಟಿಯ ಸಮಸ್ಯೆಯಿಂದಾಗಿ ಅಮೆರಿಕ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಲು ಆಗಿರಲಿಲ್ಲ. 2015ರಲ್ಲಿ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಗಣರಾಜ್ಯೋತ್ಸವ ವೇಳೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.