ನವದೆಹಲಿ, ಜ.30 (Daijiworld News/PY) : "ನಾಥೂರಾಮ್ ಗೋಡ್ಸೆ ಹಾಗೂ ನರೇಂದ್ರ ಮೋದಿ ಇಬ್ಬರದ್ದೂ ಒಂದೇ ಸಿದ್ಧಾಂತ. ಆದರೆ, ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಮೋದಿ ಅವರಿಗೆ ಇಲ್ಲ" ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುರುವಾರ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಾಥೂರಾಮ್ ಗೋಡ್ಸೆ ಅವರು ಮಹಾತ್ಮ ಗಾಂಧಿ ಅವರ ಮೇಲೆ ಗುಂಡು ಹಾರಿಸಿದ್ದಾಗ ಅವರು ತನ್ನ ಕಣ್ಣನ್ನು ಮುಚ್ಚಿದ್ದರು. ಏಕೆಂದರೆ ಅವರಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ತಿಳಿದಿತ್ತು. ಆದರೆ, ಗೋಡ್ಸೆ ಹಾಗೂ ನರೇಂದ್ರ ಮೋದಿ ಇಬ್ಬರದ್ದೂ ಒಂದೇ ಸಿದ್ಧಾಂತ. ಆದರೆ, ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಮೋದಿ ಇಲ್ಲ. ಈ ವಿಚಾರ ನಿಮಗೆ ತಿಳಿದಿದೆಯೋ, ಇಲ್ಲವೋ, ನನಗೆ ಗೊತ್ತಿಲ್ಲ" ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಗುರುವಾರ ದೊಡ್ಡ ಮಟ್ಟದ ಸಾಮೂಹಿಕ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಿದ್ದರು. ಕೇರಳದ ವಯನಾಡ್ ಜಿಲ್ಲೆಯಲ್ಲಿನ ಎಸ್ಕೆಎಂಜೆ ಪ್ರೌಢ ಶಾಲೆಯಿಂದ ಪ್ರಾರಂಭವಾದ ಮೆರವಣಿಗೆ 2 ಕಿಲೋ ಮೀಟರ್ವರೆಗೆ ಸಾಗಿದ್ದು, ಈ ಮೆರವಣಿಗೆಯಲ್ಲಿ ಪಾಲ್ಗೊಂಡ ನೂರಾರು ಕಾರ್ಮಿಕರು ಮೆರವಣಿಗೆಯ ಉದ್ದಕ್ಕೂ ಸಂವಿಧಾನ ಉಳಿಸಿ ಎಂಬ ಘೋಷವಾಕ್ಯ ಕೂಗಿದರು.
ರಾಹುಲ್ ಗಾಂಧಿ ಅವರ ಸ್ವಕ್ಷೇತ್ರವೂ ಆಗಿರುವ ವಯನಾಡ್ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್, ಕೇರಳ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.