ಪ್ರಯಾಗ್ ರಾಜ್, ಜ 30(Daijiworld News/MSP): "ಅಸ್ಸಾಂನ ಜನರನ್ನು ಅಸ್ಸಾಮೀಸ್ ಎಂದು ಕರೆಯುವಂತೆ ಭಾರತದ ಪ್ರತಿಯೊಬ್ಬ ನಾಗರಿಕನು ಹಿಂದೂ" ಎಂದು ಅಸ್ಸಾಂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಮುಮಿನುಲ್ ಓವಲ್ ಹೇಳಿದ್ದಾರೆ.
ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಅಸ್ಸಾಂನ ಹಲವಾರು ಮುಸ್ಲಿಂ ಸಂಘಟನೆಗಳ ಪರವಾಗಿ ಐದು ಲಕ್ಷ ರೂಪಾಯಿಗಳ ಅನುದಾನವನ್ನು ಪ್ರಕಟಿಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.
ಹಿಂದೂಸ್ತಾನ್ ನಮ್ಮ ದೇಶ, ನಾವು ಇಲ್ಲೇ ಹುಟ್ಟಿ ಬೆಳೆದಂತವರು,ಭಾರತದ ಪ್ರತಿಯೊಬ್ಬ ನಾಗರಿಕನು ಹಿಂದೂ. ಆದರೆ ನಮ್ಮ ಧರ್ಮ ಇಸ್ಲಾಂ ಧರ್ಮ, ಆದರೆ ಭಾರತದ ಪ್ರಜೆಗಳಾಗಿ ನಾವು ಹೆಮ್ಮೆಯಿಂದ ನಮ್ಮನ್ನು ಹಿಂದೂಗಳು ಎಂದು ಕರೆಯುತ್ತೇವೆ ಎಂದು ಹೇಳಿದರು.
ಇನ್ನು ಪೌರತ್ವ ತಿದ್ದುಪಡಿ ವಿಚಾರವಾಗಿ ಮಾತನಾಡಿದ ಅವರು, ಅನೇಕ ಬಾಹ್ಯ ಶಕ್ತಿಗಳು ಮುಸ್ಲಿಂರ ದಾರಿ ತಪ್ಪಿಸುತ್ತಿದೆ, ಈ ಕಾಯಿದೆ ಪೌರತ್ವ ನೀಡುವುದು ಹೊರತು ಕಸಿದುಕೊಳ್ಳುವುದಲ್ಲ ಎಂದು ಹೇಳಿದರು.