ಮುಂಬೈ, ಜ.30 (Daijiworld News/PY) : "ಉದ್ದವ್ ಠಾಕ್ರೆ ಅವರು ರಾಮ ಮಂದಿರಕ್ಕೆ ಗುದ್ದಲಿಪೂಜೆ ಮಾಡಿದರೆ ನಾವು ಬಾಬ್ರಿ ಮಸೀದಿ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳುತ್ತೇವೆ" ಎಂದು ಎಸ್ಪಿ ನಾಯಕ ಫರಾನ್ ಅಜ್ಮಿ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾರ್ಚ್ ತಿಂಗಳಲ್ಲಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ಆಶೀರ್ವಾದ ಪಡೆಯುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರ ಮಗ ಫರಾನ್ ಅಜ್ಮಿ ಹೇಳಿಕೆ ನೀಡಿದ್ದು, "ನಾನು ಕೂಡ ಠಾಕ್ರೆ ಜೊತೆ ಹೋಗಿ ಬಾಬ್ರಿ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸುತ್ತೇನೆ" ಎಂದಿದ್ದಾರೆ.
ಮಾರ್ಚ್ 7ಕ್ಕೆ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡುವುದಾಗಿ ಘೋಷಿಸಿದ್ದ ಅವರು ತಮಗೆ ಸಾಥ್ ನೀಡುವಂತೆ ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್ಸಿಪಿ ನಾಯಕರನ್ನು ಕೂಡ ಆಹ್ವಾನಿಸುತ್ತೇನೆ ಎಂದಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ನಾಯಕ ಫರಾನ್ ಅಜ್ಮಿ, "ಉದ್ಧವ್ ಠಾಕ್ರೆ ಮಾರ್ಚ್ ತಿಂಗಳಲ್ಲಿ ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ನಾನು ಕೂಡ ಅವರೊಂದಿಗೆ ಹೋಗುತ್ತೇನೆ. ಅವರೇನಾದರೂ ಅಲ್ಲಿ ರಾಮ ಮಂದಿರಕ್ಕೆ ಗುದ್ದಲಿಪೂಜೆ ಮಾಡಿದರೆ ನಾವು ಬಾಬ್ರಿ ಮಸೀದಿ ನಿರ್ಮಾಣದ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಯೋಧ್ಯೆಯ ವಿವಾದದ ಕುರಿತು ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ವಿವಾದಿತ ಜಾಗವನ್ನು ರಾಮ್ಲಲ್ಲಾಗೆ ಬಿಟ್ಟುಕೊಡಬೇಕು, ಬಾಬ್ರಿ ಮಸೀದಿ ಕಟ್ಟಲು ಪ್ರತ್ಯೇಕ ಪ್ರದೇಶದಲ್ಲಿ ಜಾಗ ನೀಡಬೇಕು ಎಂದು ಆದೇಶಿಸಿತ್ತು. ಅಲ್ಲದೆ, ಈ ಬಗ್ಗೆ ಸಮಿತಿ ರಚಿಸುವಂತೆಯೂ ಸೂಚಿಸಲಾಗಿತ್ತು.