ಕಲಬುರಗಿ, ಜ.30 (Daijiworld News/PY) : "ಧರ್ಮ, ದೇವರು, ಹಿಂದುತ್ವ ಯಾರ ಆಸ್ತಿಯಲ್ಲ. ಆದರೆ ಕೆಲವರು ಅದನ್ನು ತಮ್ಮ ಆಸ್ತಿಯನ್ನಾಗಿಸಿಕೊಂಡಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗಾಣಗಾಪುರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಅವರ ಟ್ವೀಟ್ ಕುರಿತಾಗಿ ಪ್ರತಿಕ್ರಿಯಿಸಿದ ಅವರು, "ಯಾರಾದರೂ ಅಸಮಾಧಾನ ಪಟ್ಟಿದ್ದರೆ, ಅವರನ್ನೇ ಕೇಳಿ. ಅದು ಹಾದಿ ಬೀದಿಯಲ್ಲಿ ಮಾತನಾಡುವ ಪೋಸ್ಟ್ ಅಲ್ಲ" ಎಂದು ಹೇಳಿದರು.
ಪ್ರತಿಭಟನೆ ಸಂದರ್ಭದಲ್ಲಿ ಹಾನಿ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, "ಕೋರ್ಟ್ಗೆ ಯಾರು ಪಿಐಎಲ್ ಹಾಕಿಸಿದ್ದಾರೆ, ಅವರು ಯಾವ ಪಾರ್ಟಿಯವರು, ಇದರ ಹಿಂದೆ ಯಾವ ವ್ಯಕ್ತಿ ಇದ್ದಾರೆ ಅಂತ ಗೊತ್ತು. ಈ ವಿಚಾರವನ್ನು ಬೆಂಗಳೂರಿಗೆ ಹೋದ ಬಳಿಕ ನೋಡುತ್ತೇನೆ" ಎಂದರು.
"ಪಿಐಎಲ್ ಹಾಕಿಸಿ, ಹಾನಿ ವಿಚಾರವಾಗಿ ಇಷ್ಟೊಂದು ಬೇಗ ವರದಿ ನೀಡಿದ್ದಾರೆ. ಈ ವಿಚಾರದಲ್ಲಿ ರಾಜಕಾರಣವಾಗುತ್ತಿದೆ. ನನಗೆ ಯಾವುದೇ ಸಂಕಷ್ಟವಿಲ್ಲ. ಆದರೆ ನನಗೆ ತೊಂದರೆ ಕೊಡುವುದೇ ಕೆಲವರಿಗೆ ಸಂತೋಷ. ಹೀಗಾಗಿ ತೊಂದರೆ ಕೊಡುತ್ತಾ ಇರುತ್ತಾರೆ. ಆದರೆ, ಪ್ರತಿಭಟನೆ ಸಂದರ್ಭದಲ್ಲಿ ನಾನು ಕೋರ್ಟ್ ಕಸ್ಟಡಿಯಲ್ಲಿದ್ದೆ" ಎಂದು ತಿಳಿಸಿದರು.