ಕೇರಳ, ಜ 30(Daijiworld News/MSP): ಚೀನಾದ ವುಹಾನ್ ನಿಂದ ಭಾರತಕ್ಕೆ ಹಿಂದುರುಗಿದ ಕೇರಳ ಮೂಲದ ವಿದ್ಯಾರ್ಥಿನಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಆಕೆಯನ್ನು ತ್ರಿಶೂರ್ನ ಜನರಲ್ ಆಸ್ಪತ್ರೆಯ ತೀವ್ರ ನಿಗಾ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದಾನೆ ಎಂದು ಕೇರಳ ಆರೋಗ್ಯ ಸಚಿವೆ ಕೆ ಶೈಲಜಾ ಹೇಳಿದ್ದಾರೆ.
ಕೇರಳದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದ್ದು ಈ ವಿದ್ಯಾರ್ಥಿನಿ ಇತ್ತೀಚೆಗಷ್ಟೇ ಚೀನಾದ ವುಹಾನ್ ನಿಂದ ಹಿಂದಿರುಗಿದ್ದಳು. ಚೀನಾದಿಂದ ಹಿಂತಿರುಗಿದ್ದ ಪರೀಕ್ಷೆಗಳಿಗೆ 20 ಮಾದರಿಗಳನ್ನು ಕಳುಹಿಸಲಾಗಿದ್ದು, ಅವುಗಳಲ್ಲಿ ಒಂದು ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸೋಂಕು ತಗುಲಿರುವ ಯುವತಿಯ ಆರೋಗ್ಯ ಸ್ಥಿರವಾಗಿದೆ ಎಂದು ಸಚಿವೆ ಹೇಳಿದರು.
ಚೀನಾದಿಂದ ಮರಳುತ್ತಿರುವ ಪ್ರಯಾಣಿಕರು ತಕ್ಷಣ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಬೇಕು. ಮಾತ್ರವಲ್ಲದೆ ಚೀನಾದಿಂದ ಹಿಂದಿರುಗುತ್ತಿರುವವರು ಆರೋಗ್ಯ ತಪಾಸಣೆಗೆ ಒಳಗಾದ ಬಳಿಕ ಮನೆಗೆ ನೇರವಾಗಿ ಹಿಂತಿರುಗಬೇಕು. ಹೀಗಾದ್ರೆ ನಾವು ಸಾಧ್ಯವಾದಷ್ಟು ಮಟ್ಟಿಗೆ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ಸಚಿವೆ ವಿನಂತಿಸಿಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳಿಗೆ ಕೊರೋನವೈರಸ್ ರೋಗಲಕ್ಷಣಗಳೊಂದಿಗೆ ಬರುವ ರೋಗಿಗಳನ್ನು ಮೇಲ್ವಿಚಾರಣೆ ಮಾಡುವಂತೆ ನಾವು ನಿರ್ದೇಶಿಸಿದ್ದೇವೆ. ಮಾತ್ರವಲ್ಲದೆ ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆಯನ್ನು ಪ್ರಾರಂಭಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಹೇಳಿದರು.