ಪಾಟ್ನಾ, ಜ 30 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧವಾಗಿ ಜನ-ಗಣ-ಮನ ಯಾತ್ರೆ ಕೈಗೊಳ್ಳುವ ಮುಂದಾಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಕನ್ಹಯ್ಯ ಕುಮಾರ್ ಅವರು ಹಾಗೂ ಇತರರನ್ನು ಗುರುವಾರ ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಎನ್ಯುನ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರು, "ಬಡ ಜನರ ವಿರೋಧಿಯಾಗಿರುವ ಸಿಎಎ, ಎನ್ಆರ್ ಸಿ ಮತ್ತು ಎನ್ಪಿಆರ್ ವಿರುದ್ಧ ಒಂದು ತಿಂಗಳ ಕಾಲ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು" ಎಂದು ಹೇಳಿದರು.
ಈ ಹಿಂದೆ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಅನುಮತಿ ನೀಡಿದ್ದರು, ಆದರೆ ಬುಧವಾರ ರಾತ್ರಿ ಅದನ್ನು ರದ್ದು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ಅಂಗವಾಗಿ ಗುರುವಾರ ಚಂಪಾರನ್ನಿಂದ ಮೆರವಣಿಗೆ ಆಯೋಜಿಸಲಾಗಿತ್ತು.
ಕನ್ಹಯ್ಯಾ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ನೂರಾರು ಮಂದಿ ಭೀತಿಹರ್ವ ಗಾಂಧಿ ಆಶ್ರಮದ ಹೊರಗೆ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.
ಈ ಹಿಂದೆ ಕನ್ಹಯ್ಯಾ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಯು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಉರಿಯುತ್ತಿರುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದೆ. ಮೋದಿ ಹಾಗೂ ಅಮಿತ್ ಶಾ ಅವರು ಗುಜರಾತ್ ಚುನಾವಣೆ ವೇಳೆ ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದ್ದರು. ಈಗ ಅವರು ದೇಶದಲ್ಲಿ ಅದೇ ತಂತ್ರವನ್ನು ಅನುರಿಸುತ್ತಿದ್ಧಾರೆ" ಎಂದು ಹೇಳಿದ್ದರು.