ನವದೆಹಲಿ, ಜ.30 (Daijiworld News/PY): "ಕಳೆದ ಐದು ವರ್ಷಗಳಿಂದ ನಾನು ದೆಹಲಿಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಇವತ್ತು ಬಿಜೆಪಿ ನನ್ನನ್ನು ಭಯೋತ್ಪಾದಕ ಎನ್ನುತ್ತಿದೆ. ಇದು ಖೇದಕರ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ತಮ್ಮನ್ನು ಭಯೋತ್ಪಾದಕ ಎಂದು ಹೇಳಿದ ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಅವರು, "ನಾನು ಯಾರು ಎಂಬುದನ್ನು ದೆಹಲಿಯ ಜನರು ತೀರ್ಮಾನಿಸಲಿ" ಎಂದರು.
"ನನಗೆ ಸಕ್ಕರೆ ಖಾಯಿಲೆಯಿದೆ. ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ತೆಗೆದುಕೊಳ್ಳುತ್ತೇನೆ. ಸಕ್ಕರ ಖಾಯಿಲೆಯಿರುವ ವ್ಯಕ್ತಿ 3-4 ಗಂಟೆಗಳಿಗೊಮ್ಮೆ ಆಹಾರ ಸೇವಿಸದೇ ಇದ್ದಲ್ಲಿ ಆತ ಸತ್ತುಹೋಗಬಹುದು. ಅಂಥಹ ಪರಿಸ್ಥಿತಿಯಲ್ಲಿ ನಾನು ಭ್ರಷ್ಟಾಚಾರ ವಿರುದ್ದವಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದು, ಒಂದು ಸಲ 15 ದಿನ, ಮತ್ತೊಮ್ಮೆ 10 ದಿನ ಉಪವಾಸ ಕುಳಿತಿದ್ದೆ" ಎಂದು ತಿಳಿಸಿದರು.
"ನಾನು ಆರೋಗ್ಯ ವಲಯ ಸುಧಾರಿಸಲು ಹಾಗೂ ಹಿರಿಯ ನಾಗರಿಕರು ಉಚಿತವಾಗಿ ತೀರ್ಥಯಾತ್ರೆ ಕೈಗೊಳ್ಳಲು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೆಲಸ ಮಾಡಿದ್ದೇನೆ. ಈ ರೀತಿಯಾದ ಕೆಲಸವನ್ನು ಭಯೋತ್ಪಾದಕ ಮಾಡುತ್ತಾನಾ. ನಾನು ಭಯೋತ್ಪಾದಕ ಹೇಗಾಗುತ್ತೇನೆ. ಕಳೆದ 5 ವರ್ಷಗಳಲ್ಲಿ ಜನರು ನನ್ನ ವಿರುದ್ದವಾಗಿ ಎಲ್ಲಾ ರೀತಿಯಾದ ಅಧಿಕಾರಗಳನ್ನು ಬಳಸಿದ್ದಾರೆ. ನನ್ನನ್ನು ದೆಹಲಿಯ ಜನರು ಮಗನಂತೆ ಕಾಣುತ್ತಾರೆ" ಎಂದು ಹೇಳಿದರು.
ದೆಹಲಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪರ್ವೇಶ್ ವರ್ಮಾ, ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮದೀಪುರ್ನ ರಸ್ತೆಗಳು ಶಾಹೀನ್ಬಾಗ್ ಆಗುತ್ತವೆ. ಕೇಜ್ರಿವಾಲ್ನಂಥಾ ಹಲವಾರು ಮೋಸಗಾರರು ಹಾಗೂ ಭಯೋತ್ಪಾದಕರು ದೆಹಲಿಯಲ್ಲಿ ಅಡಗಿಕೊಂಡಿದ್ದಾರೆ. ಕಾಶ್ಮೀರದಲ್ಲಿರುವ ಭಯೋತ್ಪಾದಕರ ವಿರುದ್ಧ ಹೋರಾಡಬೇಕೇ ಅಥವಾ ದೆಹಲಿಯಲ್ಲಿರುವ ಉಗ್ರ ಕೇಜ್ರಿವಾಲ್ ವಿರುದ್ಧ ಹೋರಾಡಬೇಕೆ ಎಂಬ ವಿಚಾರವನ್ನು ಅರ್ಥ ಮಾಡಿಕೊಳ್ಳಲು ನಾನು ವ್ಯರ್ಥನಾಗಿದ್ದೇನೆ ಎಂದು ಹೇಳಿದ್ದರು.