ಬೆಳಗಾವಿ, ಜ.30 (Daijiworld News/PY) : "ಒಂದು ವೇಳೆ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾದರೆ ಬಿಜೆಪಿಯನ್ನು ಮುಳುಗಿಸುತ್ತಾರೆ. ಅವರಿಗೆ ಸಣ್ಣ ಕೈಗಾರಿಕೆ ಅಥವಾ ಪೌರಾಡಳಿತ ಖಾತೆ ಕೊಟ್ಟರೆ ಮಾತ್ರ ಬಿಜೆಪಿ ಸರ್ಕಾರ ಸುರಕ್ಷಿತವಾಗಲಿದೆ" ಎಂದು ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಗದಿರುವುದರ ಹಿಂದೆ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡರ ಯಾವುದೇ ತಪ್ಪಿಲ್ಲ. ಉಪಚುನಾವಣೆಗೆ ಮುನ್ನವೇ ನಾವು ರಮೇಶ್ ಜಾರಕಿಹೊಳಿಗೆ ಯಾವುದೇ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದೆವು" ಎಂದರು.
ಚುನಾವಣೆಯಲ್ಲಿ ತಮ್ಮ ಸೋಲಿನ ವಿಚಾರವಾಗಿ ಮಾತನಾಡಿದ ಅವರು, "ಅಂಬಿರಾವ್ ಪ್ರಚಾರಕ್ಕೆ ಬಂದಿದ್ದರೆ ನಾನು ಗೆಲ್ಲುತ್ತಿದ್ದೆ. ಈಗ ಅಲ್ಲಿ ಇಲ್ಲಿ ಪೂಜೆ ಅಂತ ಓಡಾಡುತ್ತಿದ್ದಾನೆ. ಜನರ ಮುಂದೆ ಸುಳ್ಳು ಹೇಳಿ ಚುನಾವಣೆ ಗೆದ್ದಿದ್ದಾರೆ. ಅಂಬಿರಾವ್ ಪಾಟೀಲ್ ಕಮಿಷನ್ಗಾಗಿ ಓಡಾಡುತ್ತಿದ್ದಾರೆ" ಎಂದು ಹೇಳಿದರು.
ಚುನಾವಣೆ ವೇಳೆ ಲಖನ್ ವಿರುದ್ಧ ಮಾತನಾಡಿದ್ದ ರಮೇಶ್ ಜಾರಕಿಹೊಳಿ, "ಆತ ಜೊತೆಯಲ್ಲಿಯೇ ಇದ್ದು ನನ್ನ ಬೆನ್ನಿಗೆ ಚೂರಿ ಹಾಕಿದ, ಆತ ನನ್ನ ತಮ್ಮನೇ ಅಲ್ಲ" ಎಂದು ಹೇಳಿದ್ದರು.