ಕಲಬುರಗಿ, ಜ.30 (Daijiworld News/PY): "ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ನ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇನೆ. ಡಿಸಿಎಂ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ನನ್ನ ಸಹೋದರನಿದ್ದಂತೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಶ್ರೀರಾಮುಲು ಅವರು, "ವಾಲ್ಮೀಕಿ ಸಮಾಜದ ಸ್ವಾಮೀಜಿಗಳು ಹಾಗೂ ಸಮಾಜದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ನನ್ನ ಪರ ಅಭಿಯಾನ ನಡೆಸುತ್ತಿದ್ದಾರೆ. ಅವರು ಅಭಿಮಾನದಿಂದ ಅಭಿಯಾನ ನಡೆಸುತ್ತಿರಬಹುದು, ಆದರೆ, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳಲಿದೆಯೋ ಅದಕ್ಕೆ ನಾನು ಬದ್ಧ. ನಾನು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ" ಎಂದರು.
"ಯಾರಿಗೆ ಯಾವ ಹುದ್ದೆ ಕೊಡಬೇಕು ಎನ್ನುವುದು ಪಕ್ಷ ನಿರ್ಧರಿಸುತ್ತದೆ. ಪಕ್ಷದ ತೀರ್ಮಾನವೇ ಅಂತಿಮ. ನಾವು ಯಾವುದೇ ಸ್ಥಾನಮಾನ ಬಯಸಿ ಪಕ್ಷಕ್ಕೆ ಬಂದವರಲ್ಲ" ಎಂದು ತಿಳಿಸಿದರು.