ಬೆಂಗಳೂರು, ಜ.30 (Daijiworld News/PY): "ಉಪಮುಖ್ಯಮಂತ್ರಿ ಹುದ್ದೆ ಮುಂದುವರಿಸುವುದು ಅಥವಾ ರದ್ದು ಮಾಡುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ" ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಪುಟ ವಿಸ್ತರಣೆ ವಿಚಾರದಲ್ಲಿ ತಡವಾಗಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಯಡಿಯೂರಪ್ಪ ಅವರು ದೆಹಲಿಗೆ ಹೋಗಿದ್ದು, ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಬಳಿಕ ಎಲ್ಲವೂ ಸುಸೂತ್ರವಾಗಲಿದೆ. ಉಪ ಚುನಾವಣೆಯಲ್ಲಿ ಸೋತವರಿಗೆ ಅಧಿಕಾರ ವಿಚಾರವೂ ಹೈಕಮಾಂಡ್ ಮಟ್ಟದಲ್ಲೇ ನಿರ್ಧಾರವಾಗಬೇಕು" ಎಂದು ಹೇಳಿದರು.
ಈ ನಡುವೆ, ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, "ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ನನ್ನನ್ನು ಸಚಿವನಾಗಿ ಮಾಡಿದರೆ ಖುಷಿ. ನನಗೆ ಸಚಿವನಾಗಲು ಗಡಿಬಿಡಿ ಇಲ್ಲ. ಸಚಿವ ಸ್ಥಾನ ದೊರಕದಿದ್ದರೆ ಶಾಸಕನಾಗಿ ಕಾರ್ಯನಿರ್ವಹಿಸುತ್ತೇನೆ" ಎಂದರು.
"ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನಾವ್ಯಾರು ಮುಖ್ಯಮಂತ್ರಿಯವರ ಮೇಲೆ ಕೋಪಿಸಿಕೊಂಡಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ರಮೇಶ್ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಆಗ್ರಹ. ಲಕ್ಷ್ಮಣ ಸವದಿ ಜೊತೆ ರಮೇಶ್ ಜಾರಕಿಹೊಳಿ ಅವರಿಗೂ ಕೊಟ್ಟರೆ ಅದೊಂದು ಐತಿಹಾಸಿಕ ತೀರ್ಮಾನವಾಗುತ್ತದೆ' ಎಂದು ಹೇಳಿದರು.
"ಹಿರಿಯರಾದ ಎಚ್.ವಿಶ್ವನಾಥ್ ಅವರಿಗೂ ಪಕ್ಷದ ನಾಯಕರು ಸೂಕ್ತ ಸ್ಥಾನಮಾನ ನೀಡುವ ವಿಶ್ವಾಸವಿದೆ. ಉಪ ಚುನಾವಣೆಯಲ್ಲಿ ಅವರಿಗೆ ಜನಾದೇಶ ಸಿಗಲಿಲ್ಲವೆಂದು ಅವರನ್ನು ಕೈಬಿಡುವಂತಿಲ್ಲ" ಎಂದು ತಿಳಿಸಿದರು.