ನವದೆಹಲಿ, ಜ 28 (DaijiworldNews/SM): ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಜ.31 ರಿಂದ ಫೆ.1ರವರೆಗೆ ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ಧಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಷ್ಕರ ಕರೆಗೆ ಬೆಂಬಲ ನೀಡಿರುವ ವಿವಿಧ ಬ್ಯಾಂಕ್ಗಳ ನೌಕರರ ಒಕ್ಕೂಟದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ಧಾರೆ. ಶೇಕಡಾ 20ರಷ್ಟು ವೇತನ ಹೆಚ್ಚಳ ಹಾಗೂ ವಾರದಲ್ಲಿ 5 ದಿನ ಬ್ಯಾಂಕ್ ಕಾರ್ಯ ನಿರ್ವಹಣೆ, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಅಲ್ಲದೇ, ನೌಕರರ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಉತ್ತೇಜನೆ, ಸಿಬ್ಬಂದಿ ಕಲ್ಯಾಣ ವೇತನ ಏರಿಕೆ, ಎಲ್ಲರಿಗೂ ಒಂದೇ ಸಮಯ ನಿಗದಿಪಡಿಸಬೇಕು ಎಂಬುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮನವಿಯಾಗಿದೆ. ಜನವರು 31 ಹಾಗೂ ಫೆಬ್ರವರಿ 1ರವರೆಗೆ ಎರಡು ದಿನಗಳ ಕಾಲ ಸಾಂಕೇತಿಕವಾಗಿ ಮುಷ್ಕರ ನಡೆಯಲಿದೆ.
ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸದಿದ್ದಲ್ಲಿ ಪುನಃ ಫೆಬ್ರವರಿ 11, 12, 13ರಂದು ಮುಷ್ಕರ ನಡೆಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.