ಫಾರೂಖಾಬಾದ್, ಜ.31 (Daijiworld News/PY) : ಉತ್ತರ ಪ್ರದೇಶದ ಫಾರೂಕಾಬಾದ್ ಸಮೀಪದ ಕೇಸರಿಯಾ ಗ್ರಾಮದಲ್ಲಿ 20 ಮಕ್ಕಳು ಹಾಗೂ ಕೆಲವು ಮಹಿಳೆಯರನ್ನು ಒತ್ತೆಯಾಗಿರಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಕೊಂದು ಮಕ್ಕಳನ್ನು, ಮಹಿಳೆಯರನ್ನು ರಕ್ಷಿಸಿದ್ದಾರೆ.
ಜ.30 ಗುರುವಾರ ರಾತ್ರಿ ಕೇಸರಿಯಾ ಗ್ರಾಮದ ಸುಭಾಷ್ ಬಾತಮ್ ಎಂಬಾತ ತನ್ನ ಮಗಳ ಹುಟ್ಟುಹಬ್ಬಕ್ಕೆಂದು ನೆರೆ-ಹೊರೆಯವರನ್ನು ಕರೆದಿದ್ದರು. ಈ ಸಂದರ್ಭ ಕಾರ್ಯಕ್ರಮಕ್ಕೆ ಬಂದಿದ್ದ 20 ಮಕ್ಕಳು ಹಾಗೂ 2 ಮಹಿಳೆಯರನ್ನು ಗನ್ ತೋರಿಸಿ ಬೆದರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಇದರಲ್ಲಿ ಆರು ತಿಂಗಳ ಮಗುವೂ ಸೇರಿತ್ತು.
ಪೊಲೀಸರು ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಿಸಿದರಾದರೂ ಆತ ಗುಂಡು ಹಾರಿಸಿದ ಕಾರಣ ಮಾತು-ಕತೆ ಸಾಧ್ಯವಾಗಿರಲಿಲ್ಲ. ಕೊನೆಗೆ ಎಸ್ಪಿಜಿ ಭದ್ರತಾ ಪಡೆ ಬಂದು ಮಧ್ಯರಾತ್ರಿ ಸುಮಾರು1:20 ರ ವೇಳೆಗೆ ಸುಭಾಷ್ ಬಾತಮ್ಗೆ ಗುಂಡು ಹೊಡೆದು ಮಕ್ಕಳು ಹಾಗೂ ಮಹಿಳೆಯರನ್ನು ರಕ್ಷಿಸಿದ್ದಾರೆ.
ಪೊಲೀಸರ ಮೇಲೆ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿರುವ ವ್ಯಕ್ತಿ ಒಂದು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದು, ಜಾಮೀನು ಪಡೆದು ಹೊರಗೆ ಬಂದಿದ್ದ. ತನ್ನನ್ನು ಸುಮ್ಮನೇ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆತ ಮನೆಯ ಒಳಗಿನಿಂದ ಕೂಗಾಡಿದ್ದ. ಸುಭಾಷ್ ಬಾತಮ್ ಸ್ಥಳೀಯ ಶಾಸಕರೊಂದಿಗೆ ಮಾತನಾಡಲು ಬಯಸಿದ್ದು, ಆದರೆ ಶಾಸಕರನ್ನು ಕರೆಸಿದಾಗ ಆತ ಶಾಸಕರೊಂದಿಗೆ ಮಾತನಾಡಲಿಲ್ಲ. ಆದರೆ ಪೊಲೀಸರ ಮಾತುಕತೆ ಬಳಿಕ ಆರು ತಿಂಗಳ ಮಗುವನ್ನು ಆತ ಬಿಡುಗಡೆ ಮಾಡಿದ್ದು, ಮನೆಯ ತಾರಸಿಯಿಂದ ಪಕ್ಕದ ಮನೆಯ ವ್ಯಕ್ತಿಗೆ ಮಗುವನ್ನು ಸುಭಾಷ್ ನೀಡಿದ್ದ.
ಮಾತುಕತೆಗೆ ಸುಭಾಷ್ ಒಪ್ಪದ ಕಾರಣ ಮಧ್ಯರಾತ್ರಿ 1 ಗಂಟೆ ವೇಳೆಗೆ ಸುಭಾಷ್ನ ಮನೆಯ ಮುಂದಿನ ಬಾಗಿಲನ್ನು ಒಡೆದು ಒಳನುಗ್ಗಿದ ಎಸ್ಪಿಜಿ ಹಾಗೂ ಸ್ಥಳೀಯ ಪೊಲೀಸರು, ಸುಭಾಷ್ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ. ಆದರೆ ಆತನೊಂದಿಗೆ ಮಾತು-ಕತೆಗೆ ಯತ್ನಿಸಿದ 2 ಪೊಲೀಸ್ ಹಾಗೂ ಒಬ್ಬ ಸ್ಥಳೀಯನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ಸತತ 9 ಗಂಟೆಗಳ ಕಾಲ ಸುಭಾಷ್ ಮಕ್ಕಳು ಹಾಗೂ ಮಹಿಳೆಯರನ್ನು ಒತ್ತೆಯಾಗಿರಿಸಿಕೊಂಡಿದ್ದ.