ನವದೆಹಲಿ, ಜ.31 (Daijiworld News/PY) : "ಮಹಾತ್ಮ ಗಾಂಧಿ ಹಾಗೂ ಜವಹರ್ಲಾಲ್ ನೆಹರು ಅವರು ಕಂಡಂತ ಕನಸು ನನಸಾಗಬೇಕು. ದೇಶದ ಯಾವ ಭಾಗವೂ ಹಿಂದುಳಿಯಬಾರದು. ಇಡೀ ದೇಶ ಸಧೃಡವಾಗಬೇಕು" ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
2020ರ ಕೇಂದ್ರ ಬಜೆಟ್ ಮೇಲಿನ ಅಧಿವೇಶನದಲ್ಲಿ ರಾಜ್ಯಸಭೆ ಹಾಗೂ ಲೋಕಸಭೆಯನ್ನುದ್ದೇಶಿಸಿ ಶುಕ್ರವಾರ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, "ನ.26ಕ್ಕೆ ಸಂವಿಧಾನ ರಚನೆಯಾಗಿ 70 ವರ್ಷವಾಗಲಿದೆ. ಭಾರತದ ಸಂವಿಧಾನ ಎಲ್ಲರಿಗೂ ಮಾರ್ಗದರ್ಶಕ. ಹೀಗಾಗಿ ಸಂವಿಧಾನಬದ್ಧರಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕಿದೆ. ಈ ದಶಕದಲ್ಲಿ ಭಾರತ ಸದೃಢವಾಗಬೇಕು. ಗಾಂಧಿ-ನೆಹರೂ ಕಂಡ ಕನಸು ನನಸಾಗಬೇಕು" ಎಂದು ತಿಳಿಸಿದರು.
"2019ರಲ್ಲಿ ಮಹತ್ವದ ಹಲವು ಕಾನೂನುಗಳು ಜಾರಿಯಾಗಿದ್ದು, ಹಲವು ಮಹತ್ವದ ಕಾನೂನುಗಳನ್ನು ರೂಪಿಸಿದ್ದೇವೆ. ಚಿಟ್ ಫಂಡ್ನ ವಂಚನೆ ತಪ್ಪಿಸುವ ಸಲುವಾಗಿ ಸಿಎಎ ಸೇರಿ ಹಲವು ಐತಿಹಾಸಿಕ ಕಾಯ್ದೆಗಳು ಜಾರಿಯಾಗಿವೆ. ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ತ್ರಿವಳಿ ತಲಾಖ್ ನಿರ್ಬಂಧಿಸಿದೆ. ಸರ್ಕಾರವು ಜನರ ವಿಶ್ವಾಸ ಗಳಿಸಿದೆ. 7 ಲಕ್ಷ ಜನರಿಗೆ ಪಿಂಚಣಿಯ ಲಾಭ ದೊರೆತಿದೆ" ಎಂದರು.
"ನವಭಾರತ ನಿರ್ಮಾಣಕ್ಕೆ ಜನಾದೇಶ ಸಿಕ್ಕಿದೆ. ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಯಾಗಿದೆ. ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ. ವ್ಯಾಪಾರ ಕ್ಷೇತ್ರದಲ್ಲಿ ಭಾರತದ ಶ್ರೇಯಾಂಕ ವೃದ್ಧಿಯಾಗಿದೆ. ಕಳೆದ 6 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. 5 ಕೋಟಿ ಜನರಿಗೆ ಆರೋಗ್ಯ ವಿಮೆ ಜಾರಿಯಾಗಿದೆ" ಎಂದು ತಿಳಿಸಿದರು.
"ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಣಿವೆ ರಾಜ್ಯದ ಜನತೆಗೆ ಸಮಾನವಾದ ಅಧಿಕಾರ ನೀಡಲಾಗುವುದು, ಅಭಿವೃದ್ಧಿ ಪರ್ವ ಆರಂಭವಾಗುವುದು. ಸಬ್ ಕಾ ಸಾತ್ ಮಂತ್ರದಂತೆ ಎಲ್ಲರ ಅಭಿವೃದ್ಧಿಯಾಗಲಿದೆ. ಜಮ್ಮುಕಾಶ್ಮೀರ ವಿಕಾಸಕ್ಕೆ ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ. ಕಾಶ್ಮೀರದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕಣಿವೆ ರಾಜ್ಯದ 370ನೇ ವಿಧಿ ರದ್ಧತಿ ಐತಿಹಾಸಿಕ ಕ್ರಮ. ದೇಶದಲ್ಲಿ ಯಾವುದೇ ಪ್ರತಿಭಟನೆಯ ವೇಳೆಯೂ ಹಿಂಸಾಚಾರ ಸರಿಯಲ್ಲ. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಕೆ" ನೀಡಿದರು.