ಬೆಂಗಳೂರು, ಜ.31 (Daijiworld News/PY) : ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತೀ ಲೀಟರ್ಗೆ ಎರಡು ರೂಪಾಯಿ ಹೆಚ್ಚಿಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಿರ್ಧರಿಸಿದೆ. ಹೆಚ್ಚಳವು ಫೆಬ್ರವರಿ 1 ರ ಶನಿವಾರದಿಂದ ಜಾರಿಗೆ ಬರಲಿದೆ.
ಪ್ರತೀ ಲೀಟರ್ಗೆ 3 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, 2 ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 35 ರೂ. ಇದ್ದು ಬೆಲೆ ಹೆಚ್ಚಳದ ಬಳಿಕ 37 ರೂ ಆಗಲಿದೆ.
ಜ.30 ಗುರುವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ದರ ಹೆಚ್ಚಳಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಈ ವಿಚಾರಕ್ಕೆ ಈಗ ಸರ್ಕಾರದ ಅನುಮತಿ ದೊರೆತಿದ್ದು, ಫೆ.1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಪ್ರತೀ ಲೀಟರ್ಗೆ ಹೆಚ್ಚಿಸಲಾಗಿರುವ 2 ರೂ. ಪೈಕಿ ಒಂದು ರೂ. ರೈತರಿಗೆ, 40 ಪೈಸೆ ರೈತರು ಸಾಕುವ ಹಸುಗಳ ವಿಮೆಗೆ, 20 ಪೈಸೆ ಹಾಲು ಉತ್ಪಾದಕರ ಸಂಘಗಳ ನೌಕರರಿಗೆ ಪ್ರೋತ್ಸಾಹಧನ, ಉಳಿದ 40 ಪೈಸೆ ಹಾಲು ಮಾರಾಟ ಮಾಡುವ ಏಜೆಂಟರಿಗೆ ಹಂಚಿಕೆಯಾಗಲಿದೆ. ಗ್ರಾಹಕರಿಂದ ಪಡೆಯುವ ಹೆಚ್ಚುವರಿ ದರ ಕೆಎಂಎಫ್ ಇಟ್ಟುಕೊಳ್ಳುವುದಿಲ್ಲ, ಬದಲಾಗಿ ಹಾಲು ಉತ್ಪಾದಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಲುಪಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಅವರು ತಿಳಿಸಿದ್ದಾರೆ.
ಪ್ರಸ್ತುತ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 24 ರಿಂದ 28 ರೂ.ವರೆಗೆ ನೀಡಲಾಗುತ್ತದೆ. ಇದರ ಜೊತೆಗೆ ಸರ್ಕಾರದ ವತಿಯಿಂದ ಪ್ರತಿ ಲೀಟರ್ಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಈಗ ದರ ಹೆಚ್ಚಳದಿಂದ ಮತ್ತೊಂದು ರೂಪಾಯಿ ರೈತರಿಗೆ ದೊರೆಯಲಿದೆ. ಆಯಾ ಜಿಲ್ಲಾ ಯೂನಿಯನ್ಗಳು ರೈತರಿಗೆ ನೀಡುವ ಹಾಲಿನ ದರ ನಿಗದಿ ಮಾಡುತ್ತವೆ.
ನಂದಿನಿ ಹಾಲಿನ ದರ ಏರಿಕೆಯಾಗದೇ 3 ವರ್ಷಗಳಾಗಿವೆ. ನಿರ್ವಹಣ ವೆಚ್ಚ ಹಾಗೂ ಹೈನುಗಾರರ ಹಿತ ಕಾಯಲು ದರ ಏರಿಕೆ ಅನಿವಾರ್ಯ ಎಂದು ವಿವಿಧ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಕೆಎಂಎಫ್ಗೆ ಮನವಿ ಮಾಡಿತ್ತು. ಈಗ ಈ ಮನವಿಗೆ ಸರ್ಕಾರ ಸ್ಪಂದಿಸಿದೆ.