ತುಮಕೂರು, ಜ.31 (Daijiworld News/PY) : "ಸಿಎಂ ಬಿಎಸ್ವೈ ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ. ಅವರೇ ಬೇರೆಯವರನ್ನು ಆಟವಾಡಿಸಬಲ್ಲರು. ಅವರು ಪ್ರಬುದ್ಧ ಹಾಗೂ ಪಳಗಿದ ರಾಜಕಾರಣಿ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಪರೇಷನ್ ಮಾಡುವ ಸಂದರ್ಭ ವೈದ್ಯರು ರೋಗಿ ಉಳಿಯಬೇಕೆನ್ನುವ ಉದ್ದೇಶವಿಟ್ಟುಕೊಂಡಿರುತ್ತಾರೆ. ಹಾಗಾಗಿ, ಬಿಪಿ, ಶುಗರ್ ನಿಯಂತ್ರಣಕ್ಕೆ ಬಂದ ನಂತರವೇ ಆಪರೇಷನ್ ಮಾಡುತ್ತಾರೆ. ಇಂತಂದೇ ತತ್ವವವನ್ನು ವರಿಷ್ಠರು ಅನುಸರಿಸುತ್ತಿದ್ದಾರೆ. ಯೋಚನೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ" ಎಂದರು.
ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಗೋಡ್ಸೆಗೆ ಹೋಲಿಸಿದ ವಿಚಾರವಾಗಿ ಮಾತನಾಡಿದ ಅವರು, "ಗಾಂಧಿಯ ಹೆಸರಿಟ್ಟುಕೊಳ್ಳುವುದು, ಅವರಂತೆ ವೇಷ ಧರಿಸುವುದು ಸುಲಭ. ಆದರೆ, ಮಹಾತ್ಮ ಗಾಂಧಿಯಾಗುವುದು ಸುಲಭವಲ್ಲ. ಗೋಡ್ಸೆ ಗಾಂಧಿಯ ದೇಹ ಮಾತ್ರ ಕೊಂದರೆ, ಕಾಂಗ್ರೆಸ್ ಗಾಂಧಿಯ ತತ್ವಗಳನ್ನು ಕೊಂದಿದೆ. ಈ ಮೂಲಕ ಗೋಡ್ಸೆಗೂ ಮೀರಿದ ಅನ್ಯಾಯವನ್ನು ಕಾಂಗ್ರೆಸ್ ಮಾಡಿದೆ" ಎಂದು ಹೇಳಿದರು.
"ಕಾಂಗ್ರೆಸ್ಗೆ ದೇಶಕ್ಕಿಂತ ಓಟ್ ಬ್ಯಾಂಕ್ ಮುಖ್ಯವಾಗಿದೆ. ಗಾಂಧಿ ತತ್ವರಹಿತ ರಾಜಕಾರಣ ಮಾಡಬಾರದು ಎಂದು ಬಯಸಿದ್ದರು. ಆದರೆ, ಕಾಂಗ್ರೆಸ್ ತತ್ವರಹಿತ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿಯ ಪ್ರತಿಯೊಂದು ಮಾತು ಅವರ ಹತಾಷೆ, ಅಪ್ರಬುದ್ಧತೆ ತೋರಿಸುತ್ತಿದೆ. ಮುಸಲೋನಿ ಸೈನ್ಯದಲ್ಲಿ ರಾಹುಲ್ ತಾತ ಇದ್ದರೆಂದು ಕೇಳಿದ್ದೇನೆ. ಬಹುಶಃ ಆ ಒಂದು ಬೆರಕೆಯ ಮಾತುಗಳನ್ನು ಇಲ್ಲಿ ರಾಹುಲ್ ಹೇಳುತ್ತಿದ್ದಾರೆ. ಅವರು ಮುಂದಿನ ಪ್ರಧಾನಿ ಎಂಬುದು, ತಿರುಕ ಕನಸು ಕಂಡಂತೆ" ಎಂದು ತಿಳಿಸಿದರು.
ದೆಹಲಿಯಲ್ಲಿ ವ್ಯಕ್ತಿಯೊಬ್ಬ ಪ್ರತಿಭಟನಾ ನಿರತರ ಮೇಲೆ ಗುಂಡಿನ ದಾಳಿ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, "ಪ್ರಜಾಪ್ರಭುತ್ವದಲ್ಲಿ ಬ್ಯಾಲೆಟ್ಗೆ ಅವಕಾಶ ಇದೆಯೇ ಹೊರತು, ಬುಲೆಟ್ಗೆ ಅಲ್ಲ. ಹಾಗಾಗಿ ತಪ್ಪಿತಸ್ಥ ಯಾರೇ ಆಗಿದ್ದರೂ ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಆಗ್ರಹವಾಗಿದೆ" ಎಂದರು.