ಬೆಂಗಳೂರು, ಜ.31 (Daijiworld News/PY) : "ಬಿಜೆಪಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ, ಇಡೀ ದೇಶದಲ್ಲಿ ಸರ್ವಾಧಿಕಾರದ ಧೋರಣೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ" ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಇಡೀ ದೇಶದಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಾ ಸರ್ವಾಧಿಕಾರದ ಧೋರಣೆ ಮಾಡುತ್ತಿದೆ" ಎಂದು ಹೇಳಿದರು.
"ಸ್ಪೀಕರ್ ಅವರು ಬಿಜೆಪಿ ಪಕ್ಷದವರೇ ಆಗಿರಬಹುದು. ಆದರೆ, ಅಧಿವೇಶನಕ್ಕೆ ಸಂಬಂಧಿಸಿದಪಟ್ಟ ಯಾವುದೇ ವಿಚಾರಗಳನ್ನು ನಿರ್ಧಾರ ಮಾಡಬೇಕಾದರೆ, ವಿಧಾನಸಭೆ ಸಲಹಾ ಸಮಿತಿ ಜೊತೆ ಕುಳಿತು ಅಧಿವೇಶನ ಹೇಗೆ ನಡೆಯಬೇಕು ಎಂದು ಚರ್ಚೆ ನಡೆಸಿ ಬಳಿಕ ನಿರ್ಧಾರ ತೆಗದುಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಸೇರಿದಂತೆ ಯಾವುದೇ ಸರ್ಕಾರ ಇರಲಿ, ಮಾಧ್ಯಮಗಳನ್ನು ಅಧಿವೇಶನದಿಂದ ಹೊರಗಿಡುವುದೇ ಆಗಲಿ ಅಥವಾ ಬೇರೆ ನಿರ್ಧಾರವೇ ಆಗಿರಲಿ ಎಲ್ಲವನ್ನು ಅದರದೇ ಆದ ಪ್ರಕ್ರಿಯೆ ಮೂಲಕ ತೀರ್ಮಾನ ತೆಗೆದುಕೊಳ್ಳಬೇಕು. ಈ ಹಿಂದೆ ನೀವು ಸರ್ಕಾರ ಉಳಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನೇ ಸದನದ ಒಳಗೆ ಬಿಟ್ಟುಕೊಂಡ ಉದಾಹರಣೆ ಇದೆ" ಎಂದರು.
"ಸದ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ರಾಜ್ಯಗಳಲ್ಲಿ ಯುವ ಸಮುದಾಯ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಾದ ನಾವು ಹೊರಗಡೆ ಏನಾಗುತ್ತಿದೆ ಎಂಬುದನ್ನು ಸದನದಲ್ಲಿ ಅಥವಾ ರಾಜ್ಯಪಾಲರಿಗೆ ಹೇಳಲು ವಿಧಾನಸಭೆ ಸರಿಯಾದ ಸ್ಥಳ. ರಾಜ್ಯಪಾಲರು ಏನು ಹೇಳುತ್ತಾರೋ ಅದರ ಬಗ್ಗೆ ನಾವು ಚರ್ಚೆ ಮಾಡಬಹುದು. ಹಿಂದೆ ಇದೇ ಬಿಜೆಪಿ ಅವರು ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಭಾಷಣದ ವೇಳೆ ಏನು ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳಾದ ನೀವು ಜನರಿಗೆ ತೋರಿಸಬೇಕು. ಟಿಪ್ಪು ವಿಚಾರದಲ್ಲಿ ಬಿಜೆಪಿಯವರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ" ಎಂದರು.
"ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸುವಾಗ ಬಸವಣ್ಣನವರ ತತ್ವಗಳನ್ನು ಹೇಳಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮಾತುಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ಹಂತದಲ್ಲೂ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದ ಯಡಿಯೂರಪ್ಪನವರು ಗಾಬರಿಯಿಂದ ಈ ರೀತಿ ದ್ವೇಷದ ರಾಜಕಾರಣಕ್ಕೆ ಮುಂದಾಗಿರುವುದು ಏಕೆ" ಎಂದು ಕೇಳಿದ್ದಾರೆ.