ಬಾಗಲಕೋಟೆ, ಜ.31 (Daijiworld News/PY): "ಬಿಜೆಪಿ ಹೈಕಮಾಂಡ್ ರಾಜಾಹುಲಿಯನ್ನು ಬೋನಿನಿಂದ ಹೊರಗಡೆ ಬಿಡುತ್ತಿಲ್ಲ" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, "ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ ಎಂದು ಜನರು ಹೇಳುತ್ತಿದ್ದರು. ಆದರೆ ಯಾಕೆ ಅನುಮತಿಗಾಗಿ ಕಾಯುತ್ತಿದ್ದಾರೆ ತಿಳಿದಿಲ್ಲ. ಬಿಎಸ್ವೈ ಬಗ್ಗೆ ನನಗೆ ಗೌರವ ಇದೆ. ಅವರು ಹಿರಿಯರು. ಬಿಎಸ್ವೈ ಅವರು ಮಾಜಿ ಸಿಎಂ ನಿಜಲಿಂಗಪ್ಪ ಅವರ ಬಳಿಕ ನಾಲ್ಕನೇ ಭಾರಿ ಸಿಎಂ ಆದವರು. ಆದರೆ ಕೆಲಸ ಮಾಡಲು ಹೈಕಮಾಂಡ್ ಅವರಿಗೆ ಯಾಕೆ ಬಿಡುತ್ತಿಲ್ಲ. ನಾನು ಬಿಎಸ್ವೈ ಸಲುವಾಗಿ ಮರುಕ ಪಡುತ್ತಿಲ್ಲ. ರಾಜ್ಯದ ಅಭಿವೃದ್ದಿಗಾಗಿ ಮಂತ್ರಿ ಮಂಡಲ ಬೇಗ ರಚನೆ ಮಾಡಬೇಕು" ಎಂದು ತಿಳಿಸಿದರು.
"ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಕೆಳಮನೆ, ಮೇಲ್ಮನೆ ಶಾಸಕರು 300 ಜನರಿದ್ದೇವೆ. ವರ್ಷಕ್ಕೆ 2 ಕೋಟಿ ಪ್ರದೇಶಾಭಿವೃದ್ಧಿ ನಿಧಿ ಕೊಡಬೇಕು ಎಂದು ಹೇಳಿದರು.
"2019-20ನೇ ಸಾಲಿನ ಹಣಕಾಸು ವರ್ಷದ 10 ತಿಂಗಳು ಈಗಾಗಲೇ ಗತಿಸಿದೆ. ಹಣಕಾಸು ವರ್ಷ ಮುಗಿಯುವುದಕ್ಕೆ ಎರಡು ತಿಂಗಳು ಬಾಕಿ ಉಳಿದಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ 2 ಕೋಟಿಯಲ್ಲಿ 50 ಲಕ್ಷ ಮಾತ್ರ ಕೊಟ್ಟಿದ್ದಾರೆ. ಉಳಿದ ಹಣ ಇನ್ನೂ ಕೊಟ್ಟಿಲ್ಲ" ಎಂದು ನುಡಿದರು.
"ಹಿಂದಿನ ಸಾಲಿನ 39 ಲಕ್ಷ ಹಣ ಇನ್ನು ಬಂದಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ತಿಳಿಯುವುದಕ್ಕೆ ಇದೊಂದೇ ಉದಾಹರಣೆ ಸಾಕಲ್ಲವೇ" ಎಂದು ಕೇಳಿದರು.