ನವದೆಹಲಿ, ಜ.31 (Daijiworld News/PY): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ 2019-20ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಮುಂದಿನ 2020-2021ರ ಸಾಲಿನ ಏಪ್ರಿಲ್ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ 6 ರಿಂದ 6.5ಕ್ಕೆ ಏರಿಕೆ ಆಗಲಿದೆ ಎಂದು ತಿಳಿಸಿದ್ದಾರೆ.
ಬಜೆಟ್ ಪೂರ್ವ ಸಮೀಕ್ಷೆಯಲ್ಲಿ ದೇಶದ ಜಿಡಿಪಿ ಶೇ.5ರಷ್ಟು ಇದೆ. ಅಲ್ಲದೇ 2019-2020ರ ಸಾಲಿನಲ್ಲಿ ದೇಶದ ಜಿಡಿಪಿ ಶೇ.7ರಷ್ಟು ಇರಲಿದೆ. ವಾರ್ಷಿಕ ಹಣಕಾಸು ಸಮೀಕ್ಷೆಯ ವರದಿಯನ್ನು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ನೇತೃತ್ವದ ತಂಡ ತಯಾರಿಸಿತ್ತು.
ದೇಶದ ಜಿಡಿಪಿ ಅಭಿವೃದ್ದಿ ಬಗ್ಗೆ ಸರ್ಕಾರ ಪ್ರಸಕ್ತ ಸಾಲಿನ ವಿತ್ತೀಯ ಕೊರತೆಯನ್ನು ನಿವಾರಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಕೊರತೆಯ ಗುರಿಯನ್ನು ಸಡಿಲಿಕೆ ಮಾಡಲು ಕೇಂದ್ರ ಮುಂದಾಗುವ ನಿರೀಕ್ಷೆ ಇದೆ. ಆರ್ಥಿಕ ಹಿಂಜರಿಕೆಯಿಂದ ಕಂದಾಯ ಸಂಗ್ರಹದಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಜಾಗತಿಕ ವ್ಯಾಪಾರ ಸಂಘರ್ಷ ಮುಂದುವರೆದರೆ ಭಾರತೀಯ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.