ನವದೆಹಲಿ, ಜ.31 (Daijiworld News/PY) : "ನಾನಂದು ಕೊಂಡಂತೆ ಎಲ್ಲವೂ ಆಗಿದೆ. ಎರಡು ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು" ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅಮಿತ್ ಶಾ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ, "ನಾನು ಅಂದುಕೊಂಡಂತೆ ಎಲ್ಲವೂ ಆಗಿದೆ. ನಾನು ಬೆಂಗಳೂರಿಗೆ ಹೋಗಿ ಕೆಲವರೊಂದಿಗೆ ಚರ್ಚಿಸಿ, ಎರಡು ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು. ನಮ್ಮ ಎಲ್ಲಾ ಸಲಹೆಗಳಿಗೆ ಅಮಿತ್ ಶಾ ಅವರು ಒಪ್ಪಿಗೆ ನೀಡಿದ್ದಾರೆ. ನೀವು ಯಾವಾಗ ಬೇಕಿದ್ದರೂ ಸಂಪುಟ ವಿಸ್ತರಣೆ ಮಾಡಿ" ಎಂದು ಹೇಳಿದ್ದಾರೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ಮಾತನಾಡಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಜ.30 ಗುರುವಾರದಂದು ದೆಹಲಿಗೆ ಆಗಮಿಸಿದ್ದರು. ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆದರೆ, ಈ ಭೇಟಿ ಕೇವಲ 5 ನಿಮಿಷಕ್ಕಷ್ಟೇ ಸೀಮಿತವಾದ್ದರಿಂದ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪುನಃ ಭೇಟಿಯಾಗುವಂತೆ ಅಮಿತ್ ಶಾ ಅವರು ತಿಳಿಸಿದ್ದರು.
ಆದರೆ, ಶುಕ್ರವಾರ ಬೆಳಗ್ಗೆಯಿಂದ ಅಮಿತ್ ಶಾ ಅವರ ಭೇಟಿಗಾಗಿ ಬಿಎಸ್ವೈ ಕಾದು ಕುಳಿತಿದ್ದರು. ಸಂಜೆ 4 ಗಂಟೆಗೆ ಅಮಿತ್ ಶಾ ಅವರ ಭೇಟಿಗೆ ಅವಕಾಶ ದೊರಕಿದ್ದು ಬಳಿಕ ಬಿಎಸ್ವೈ ಅವರು ಸಂಸತ್ ಭವನದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.