ಬೆಂಗಳೂರು, ಜ 31 (DaijiworldNews/SM): ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈಗಾಗಲೇ ಸೇವೆಯಲ್ಲಿರುವ ನೀಲಮಣಿ ರಾಜು ಅವರು ಸೇವೆಯಿಂದ ನಿವೃತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಅವರನ್ನು ಪೊಲೀಸ್ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರ್ದೇಶಕರ ಹುದ್ದೆಗೆ ನೇಮಕಗೊಳಿಸಲಾಗಿದೆ. ಈ ಹಿಂದೆ ಅವರು ರಾಜ್ಯದ ಸಿಐಡಿ ವಿಭಾಗದಲ್ಲಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸಾದ್ ಸೂದ್ ಅವರು ೧೯೮೬ರ ಐಪಿಎಸ್ ಬ್ಯಾಚ್ ನಲ್ಲಿ ತೇರ್ಗಡೆಹೊಂದಿದ್ದರು.
ಇನ್ನು ಈ ಹಿಂದೆ ಡಿಜಿ, ಐಜಿಪಿಯಾಗಿ ಸೇವೆಯಲ್ಲಿದ್ದ ನೀಲಮಣಿ ಎನ್. ರಾಜು ಅವರು ಶನಿವಾರ ತಮ್ಮ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿ ಪ್ರವೀಣ್ ಸೂದ್ ಅವರನ್ನು ಸರಕಾರ ನೇಮಕ ಮಾಡಿದೆ. ಇನ್ನು ಇದೇ ಸ್ಥಾನಕ್ಕೆ ಎ.ಎಂ. ಪ್ರಸಾದ್ ಅವರು ಕೂಡ ರೇಸ್ ನಲ್ಲಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಸರಕಾರ ಕೂಡ ಅವರನ್ನೇ ನೇಮಕ ಮಾಡಲು ಒಲವು ಹೊಂದಿತ್ತು ಎನ್ನಲಾಗಿದೆ. ಆದರೆ, ಅಂತಿಮ ಹಂತದಲ್ಲಿ ಪ್ರವೀಣ್ ಸೂದ್ ಅವರನ್ನು ನೇಮಕಗೊಳಿಸಲಾಗಿದೆ.