ನವದೆಹಲಿ, ಜ 30 (DaijiworldNews/SM): ದೇಶಕ್ಕೆ ದೇಶವನ್ನೇ ನಲುಗಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಧೋಷಿಗಳಾಗಿ ಮರಣ ದಂಡನೆಗೆ ಗುರಿಯಾಗಿರುವ ಆರೋಪಿಗಳಿಗೆ ಶನಿವಾರದಂದು ಗಲ್ಲು ಶಿಕ್ಷೆ ನಿಗದಿಗೊಳಿಸಲಾಗಿತ್ತು. ಆದರೆ, ಅದಕ್ಕೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಈಗಾಗಲೇ ದೋಷಿಗಳೆಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಫೆಬ್ರವರಿ 01ರಂದು ಮರಣ ದಂಡನೆ ಫಿಕ್ಸ್ ಆಗಿತ್ತು. ಆದರೆ, ಅದಕ್ಕೆ ತಡೆ ನೀಡಬೇಕೆಂದು ಅತ್ಯಾಚಾರಿಗಳ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನಿರ್ಭಯಾ ಅಪರಾಧಿಗಳು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, ಮುಂದಿನ ದಿನಾಂಕ ಗೊತ್ತುಪಡಿಸುವ ತನಕ ಈ ನಾಲ್ವರ ಗಲ್ಲುಶಿಕ್ಷೆಗೆ ತಡೆಯಲಾಗಿದೆ.
ವಿನಯ್ ಕುಮಾರ್ ಶರ್ಮಾನ ಕ್ಷಮಾದಾನ ಅರ್ಜಿ ರಾಷ್ಟ್ರಪತಿಯವರ ಬಳಿಯಲ್ಲಿ ಪರಿಶೀಲನೆಗೆ ಬಾಕಿ ಇರುವ ಕಾರಣ ಅಪರಾಧಿಗಳ ಗಲ್ಲು ಶಿಕ್ಷೆ ದಿನಾಂಕವನ್ನು ಮುಂದೂಡಬೇಕೆಂದು ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಪರ ವಕೀಲರಾದ ಎ.ಪಿ. ಸಿಂಗ್ ಅವರು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು.