ಧಾರವಾಡ, ಫೆ. 01 (Daijiworld News/MB) : "ನನಗೆ ನನ್ನ ಬರವಣಿಗೆ ಕಾಲ ಮುಗಿಯಿತು ಅನಿಸುತ್ತಿದೆ. ನಾನು ಇನ್ನು ಬರೆಯುತ್ತೀನೋ ಇಲ್ಲವೋ ಗೊತ್ತಿಲ್ಲ" ಎಂದು ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ಅವರು ಶುಕ್ರವಾರ ಹೇಳಿದ್ದಾರೆ.
ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕಿಂತ ಮೊದಲು ಆಯೋಜಿಸಿದ್ದ ಸಾಹಿತ್ಯ ಸಂವಾದದಲ್ಲಿ ಮುಂದಿನ ಕಾದಂಬರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, "ನಾನು ಉತ್ತರಕಾಂಡ ಕಾದಂಬರಿ ಬಳಿಕ ಯಾವುದನ್ನು ಬರೆದಿಲ್ಲ. ನನಗೆ ಹೊಸ ಯಾವುದೇ ಆಲೋಚನೆಗಳು ಹೊಳೆದಿಲ್ಲ. ಇದಕ್ಕೆ ವಯಸ್ಸಿನ ಮಿತಿ ಇರುವುದು ಕೂಡಾ ಹೌದು" ಎಂದಿದ್ದಾರೆ.
ಈ ಸಂವಾದದಲ್ಲಿ ಬೇರೆ ವಿಷಯಗಳ ಕುರಿತು ಮಾತನಾಡಿದ ಅವರು, "ಸಾಹಿತ್ಯದಲ್ಲಿ ಚಳವಳಿಗಳು ಹೆಚ್ಚು ಅಪಾಯಕಾರಿ. ಯಾವುದೋ ಒಂದು ಚಳವಳಿ ನಡೆಯುವ ಕಾಲಘಟ್ಟದಲ್ಲಿ ಆ ಚಳವಳಿ ಪರವಾಗಿ ಕೃತಿ ಬರೆದರೆ, ಅದನ್ನು ಪ್ರಶಂಸಿಸುವರು ಬಹಳಷ್ಟು ಜನ ಇರುತ್ತಾರೆ. ಹಾಗೆಯೆ ಆ ಚಳವಳಿಗೆ ಬೆಂಬಲ ನೀಡುವ ಪತ್ರಿಕೆಗಳೂ ಕೂಡಾ ಅದನ್ನು ಪ್ರೋತ್ಸಾಹಿಸುತ್ತದೆ. ಆದರೆ ಆ ಚಳವಳಿ ವಿರುದ್ಧವಾಗಿ ಬರೆದಲ್ಲಿ ಎಲ್ಲರೂ ವಿರೋಧ ವ್ಯಕ್ತಪಡಿಸುತ್ತಾರೆ. ಆ ಹಿನ್ನಲೆಯಲ್ಲಿ ಸಾಹಿತಿಗೆ ಎಲ್ಲವೂ ತಿಳಿದಿರಬೇಕು ಆದರೆ ಯಾವ ವಿಷಯಕ್ಕೂ ಗಂಟು ಬೀಳಬಾರದು" ಎಂದು ಅಭಿಪ್ರಾಯಪಟ್ಟರು.
ಜಾತಿ ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಜಾತಿ ಸೃಷ್ಟಿಯ ವಿಷಯದಲ್ಲಿ ಬ್ರಾಹ್ಮಣರನ್ನೇ ಹೆಚ್ಚು ದೂಷಿಸಲಾಗುತ್ತದೆ. ಆದರೆ ಕೆಲಸದ ಆಧಾರದಲ್ಲಿ ನಮ್ಮಲ್ಲಿ ಜಾತಿ ಹುಟ್ಟಿಕೊಂಡಿದೆ ಹೊರತು ಯಾರೋ ಸೃಷ್ಟಿ ಮಾಡಿರುವುದಲ್ಲ. ತಂದೆಯಂತೆ ನೇಯ್ಗೆ ಕಲಿತ ಮಗಳನ್ನು ನೇಕಾರ ತನ್ನ ಕೆಲಸ ಗೊತ್ತಿರುವ ಮನೆಗ ವಿವಾಹ ಮಾಡಿ ಕೊಡುತ್ತಾನೆಯೇ ವಿನಃ ಬೇರೆ ಕುಟುಂಬಕ್ಕಲ್ಲ. ಈಗಲೂ ವೈದ್ಯನಾದ ವರನಿಗೆ ವೈದ್ಯೆಯಾಗಿರುವ ವಧುವನ್ನೇ ಹುಡುಕುತ್ತಿರುವುದು ಆ ಪದ್ಧತಿ ಮುಂದುವರೆದಿರುವುದಕ್ಕೆ ಸಾಕ್ಷಿ" ಎಂದು ಹೇಳಿದರು.
ಕನ್ನಡ ಶಿಕ್ಷಣ ಮಾಧ್ಯಮ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, "ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಪ್ರಸ್ತಾಪಿಸಿದೆ. 4ನೇ ತರಗತಿವರೆಗೂ ರಾಜ್ಯ ಭಾಷೆಯಲ್ಲೇ ವಿಷಯ ಕಲಿಸಬೇಕು. ಆ ಬಳಿಕ ಇಂಗ್ಲಿಷ್ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲಿಸಬೇಕು. ಇತರ ವಿಷಯಗಳನ್ನು ಎರಡೂ ಭಾಷೆಯಲ್ಲಿ ಕಲಿಸಿದರೆ ಮಕ್ಕಳಿಗೆ ಅರ್ಥವಾಗುತ್ತದೆ ಎಂದು ಹೇಳಿದೆ. ನ್ಯಾಯಾಲಯದಲ್ಲೂ ಕಲಿಕೆಯ ಮಾಧ್ಯಮದ ಬದಲು, ಪಾಲಕರ ಸ್ವಾತಂತ್ರ್ಯವಾಗಿ ಬದಲಾಗಿದ್ದರಿಂದ ಮಸೂದೆ ಮೂಲಕ ಭಾಷಾ ಮಾಧ್ಯಮವನ್ನು ಉಳಿಸುವುದೊಂದೇ ಮಾರ್ಗ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಮೋದಿ, ಯಾವುದೇ ಮಸೂದೆ ತಂದರೂ ಅದಕ್ಕೆ ವಿರೋಧಪಕ್ಷದವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಈ ವಿಷಯದಲ್ಲಿ ಬಿಜೆಪಿಯ ಕೆಲ ಸಂಸದರೂ ಅವರಂತೆಯೇ ನಡೆಯುವ ಸಾಧ್ಯತೆ ಇದೆ. ಇದನ್ನು ಯೋಚಿಸಿ ಮಸೂದೆ ತರಲಾಗುವುದು ಎಂದಿದ್ದಾರೆ" ಎಂದು ಬೈರಪ್ಪ ಅವರು ತಿಳಿಸಿದ್ದಾರೆ.
ಸಂವಾದದಲ್ಲಿ ಡಾ. ಜಿ.ಎಂ.ಹೆಗಡೆ, ಹರ್ಷ ಡಂಬಳ, ಡಾ. ಸಂಗಮನಾಥ ಲೋಕಾಪುರ, ಡಾ. ಶಶಿಧರ ನರೇಂದ್ರ ಪಾಲ್ಗೊಂಡಿದ್ದರು. ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಇದ್ದರು.