ಬೆಂಗಳೂರು, ಫೆ. 01 (Daijiworld News/MB) : ನಾನು ಸಚಿವ ಆಗುವುದು ಖಚಿತ, ಯಡಿಯೂರಪ್ಪ ನನ್ನನ್ನು ಮಂತ್ರಿ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ನಿಂದ ಅಸ್ತು ದೊರೆತಿದ್ದು, ಈಗ ಗೆದ್ದ 10 ಶಾಸಕರಿಗೆ ಮಾತ್ರ ಸಂಪುಟದಲ್ಲಿ ಸೇರಿಸಲಾಗುತ್ತದೆ. ಹಾಗಾಗಿ ಮಹೇಶ್ ಕುಮಟಳ್ಳಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಮಾತನಾಡಿದ ಕುಮಟಳ್ಳಿಯವರು ಸಚಿವ ಸ್ಥಾನ ದೊರೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪನವರು ಯಾವತ್ತೂ ಕೊಟ್ಟ ಮಾತು ತಪ್ಪುವವರಲ್ಲ. ಅವರು ಪ್ರಾಣ ಬೇಕಾದರೂ ಬಿಡುತ್ತಾರೆ. ಆದರೆ ಯಡಿಯೂರಪ್ಪ ಮಾತು ತಪ್ಪಲ್ಲ. ವಿಪಕ್ಷದವರು ಕೂಡಾ ಯಡಿಯೂರಪ್ಪ ಮಾತು ತಪ್ಪಲ್ಲ ಎಂದು ಹೇಳುತ್ತಾರೆ. ಆ ನಿಟ್ಟಿನಲ್ಲಿ ನಾನು ಸಚಿವನಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸುಮಾರು 35 ಸಾವಿರ ಜನರ ಎದುರು ಯಡಿಯೂರಪ್ಪ ಅವರು ನನ್ನನ್ನು ಹಾಗೂ ಪಾಟೀಲ್ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ಅವರು ಕೊಟ್ಟ ಮಾತನ್ನು ತಪ್ಪಲ್ಲ ಎಂಬ ವಿಶ್ವಾಸ ನಮಗಿದೆ ಎಂದರು.
ಈ ವೇಳೆ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದ ವಿಷಯದಲ್ಲಿ ಮಾತನಾಡಿದ ಅವರು, "ನಾವು ರಾಜೀನಾಮೆ ಕೊಟ್ಟಾಗ ನಮಗೆ ಅವಮಾನ ಮಾಡಲಾಗಿದೆ. ಯಡಿಯೂರಪ್ಪ, ಅಮಿತ್ ಶಾ, ಕಾರ್ಯಕರ್ತರು ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ. ಆದರೆ ಒಂದೂವರೆ ವರ್ಷ ನಮಗೆ ಹುಲಿ ಬಾಯಿಗೆ ತಲೆ ಕೊಟ್ಟ ರೀತಿ ಆಗಿತ್ತು. ಗರಗಸದ ಮಧ್ಯೆ ಸಿಕ್ಕಿಹಾಕಿಕೊಮಡವರಂತೆ ಆಗಿದ್ದೆವು ಎಂದು ದೂರಿದ್ದಾರೆ.
ನಮಗೆ ಇಷ್ಟೆಲ್ಲಾ ಅವಮಾನವಾದ ಬಳಿಕವೂ ನಮಗೆ ದ್ರೋಹ ಮಾಡಲಾರರು ಎಂಬ ನಂಬಿಕೆ ನಮಗಿದೆ. ನನಗೆ ಸಚಿವ ಸ್ಥಾನ ನೀಡದಿದ್ದಲ್ಲಿ ನಂಬಿಕೆ ದ್ರೋಹ ಮಾಡಿದಂತೆ. ಆದರೆ ನೂರಕ್ಕೆ ನೂರು ನಾನು ಸಚಿವನಾಗುತ್ತೇನೆ ಎಂದು ಹೇಳಿದರು.