ಮೈಸೂರು, ಫೆ. 01 (Daijiworld News/MB) : ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನವಿಲ್ಲ ಎಂಬ ವಿಚಾರದಿಂದ ಕೋಪಗೋಡಿರುವ ಮಾಜಿ ಸಚಿವ, ಜೆಡಿಎಸ್ನಿಂದ ಬಿಜೆಪಿಗೆ ಹೋದ ಅಡಗೂರು ಎಚ್.ವಿಶ್ವನಾಥ್ ಅವರು, "ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನವಾದ ಬಗ್ಗೆ ಹಾಗೂ ಸರ್ಕಾರ ರಚನೆ ಮಾಡಲು ಬಿಜೆಪಿ ನಡೆಸಿದ "ಆಪರೇಷನ್ ಕಮಲ" ಕುರಿತಾಗಿ ಪುಸ್ತಕ ಬರೆಯುವುದಾಗಿ ಹೇಳಿದ್ದಾರೆ.
ಹಾಗೆಯೇ ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮನ್ನು ಸಹ ಪರಿಗಣಿಸುತ್ತಾರೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಹಳ್ಳಿಹಕ್ಕಿ ಹಾಡು" ಪುಸ್ತಕದಲ್ಲಿ ಹಲವು ನಾಯಕರ ಬಗ್ಗೆ ಬರೆದಿದ್ದ ವಿಶ್ವನಾಥ್ ಅವರು, ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಗದಿದ್ದರೆ ಆಪರೇಷನ್ ಕಮಲದ ಬಂಡವಾಳ ಬಯಲು ಮಾಡುವ ತಂತ್ರ ರೂಪಿಸಿದ್ದಾರೆ.
ರಾಜ್ಯದಲ್ಲಿ ಹದಿನಾಲ್ಕು ತಿಂಗಳ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನ ಮಾಡಲು ಬೇಕಾಗಿ ಏನೆಲ್ಲಾ ನಡೆಸಲಾಗಿತ್ತು, ಆಪರೇಷನ್ ಕಮಲದ ಹಿಂದೆ ಯಾರೆಲ್ಲಾ ಇದ್ದಾರೆ, ಮುಂಬೈ ಕೋಲ್ಕತಾದಲ್ಲಿ ಏನೆಲ್ಲಾ ನಡೆದಿದೆ, 17 ಶಾಸಕರ ರಾಜಿನಾಮೆ ಕುರಿತು, ಬಿಜೆಪಿ ಸರ್ಕಾರ ರಚನೆಯ ಬಗ್ಗೆ, ಸುಪ್ರೀಂ ಕೋರ್ಟ್ನಲ್ಲಿ ಮೆಟ್ಟಿಲೇರಿದ ಅನರ್ಹ ಶಾಸಕರ ವಿಷಯ, ಉಪಚುನಾವಣೆ, ಬಿಜೆಪಿ ನಾಐಕರ ಜೊತೆಗೆ ಏನೆಲ್ಲಾ ಮಾತುಕತೆ ನಡೆದಿದೆ ಎಂಬ ಎಲ್ಲಾ ಮಾಹಿತಿಗಳನ್ನು ದಾಖಲಿಸಿ ಪುಸ್ತಕ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಇವೆಲ್ಲದರ ಕುರಿತು ಟಿಪ್ಪಣಿ ಬರೆದಿದ್ದು ಅದಕ್ಕೆ ಅಂತಿಮ ರೂಪ ಕೊಟ್ಟು ಬಿಡುಗಡೆ ಮಾಡುವುದಷ್ಟೆ ಬಾಕಿಯಾಗಿದೆ. ಆಪರೇಷನ್ ಕಮಲದಲ್ಲಿ ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್ ನಾಯಕರೂ ಇದ್ದಾರೆ ಎಂದು ಹೇಳಿದರು.