ಬೆಂಗಳೂರು, ಫೆ. 01 (Daijiworld News/MB) : ಸೋಮವಾರ ಸಂಪುಟ ವಿಸ್ತರಣೆ ಖಚಿತವಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಶುಕ್ರವಾರ ದೆಹಲಿಯಿಂದ ಹಿಂದಿರುಗಿದ ಅವರು ಎರಡು ಮೂರು ದಿನಗಳಲ್ಲಿ ಎಲ್ಲರ ವಿಶ್ವಾಸ ಪಡೆದು ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ ಇಂದು ಸೋಮವಾರವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಖಚಿತವಾಗಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, "ನಾವು ಇರಿಸಿದ ಪಟ್ಟಿಗೆ ಪಕ್ಷದ ವರಿಷ್ಠರು ಒಪ್ಪಿಗೆ ಸೂಚಿಸಿದ್ದಾರೆ. ಕೆಲವರ ಮನವೊಲಿಸಿ ಹಾಗೂ ರಾಜ್ಯದ ಕೆಲ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು. ಪ್ರಸ್ತುತವಿರುವ ಮೂರು ಡಿಸಿಎಂ ಸ್ಥಾನಗಳನ್ನು ಮುಂದುವರಿಸಲಾಗುತ್ತದೆ. ಆದರೆ ಹೊಸ ಡಿಸಿಎಂ ಹುದ್ದೆ ನೀಡಲಾಗುವುದಿಲ್ಲ ಎಂದು ಹೇಳಿ ಉಪಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಿದ್ದರು.